ದಾವಣಗೆರೆ: ಮದುವೆಯಾಗಿ ಕೇವಲ ಮೂರು ತಿಂಗಳಷ್ಟೇ ಆಗಿದ್ದ ಯುವಕನೊಬ್ಬ, ಪತ್ನಿಯ ಹಳೆಯ ಪ್ರೇಮ ಸಂಬಂಧದ ವಿಚಾರದಿಂದ ತೀವ್ರ ಮನನೊಂದು ತುಂಗಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಹೆಚ್. ಕಡದಕಟ್ಟೆ ಗ್ರಾಮದ ಬಳಿ ನಡೆದಿದೆ.

ಮೃತರನ್ನು 28 ವರ್ಷದ ಮಣಿಕಂಠ ಎಂದು ಗುರುತಿಸಲಾಗಿದ್ದು, ಅವರು ಸರ್ವೆ ಇಲಾಖೆಯಲ್ಲಿ ಗುತ್ತಿಗೆ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮೂರು ತಿಂಗಳ ಹಿಂದೆ ರಾಣೆಬೆನ್ನೂರಿನ ಯುವತಿಯೊಂದಿಗೆ ವಿವಾಹವಾಗಿದ್ದ ಮಣಿಕಂಠ, ಮದುವೆಯ ಬಳಿಕವೂ ಪತ್ನಿ ತನ್ನ ಹಿಂದಿನ ಪ್ರಿಯಕರನೊಂದಿಗೆ ಸಂಪರ್ಕ ಮುಂದುವರಿಸಿದ್ದಾಳೆ ಎಂದು ತಿಳಿದು ತೀವ್ರವಾಗಿ ಮನನೊಂದಿದ್ದರು ಎನ್ನಲಾಗಿದೆ.

ಈ ವಿಷಯವಾಗಿ ಪತ್ನಿಗೆ ಹಲವು ಬಾರಿ ಬುದ್ಧಿಮಾತು ಹೇಳಿ ಹಳೆಯ ಸಂಬಂಧವನ್ನು ಕೊನೆಗೊಳಿಸುವಂತೆ ಮನವಿ ಮಾಡಿದ್ದರೂ, ಆಕೆ ಅದಕ್ಕೆ ಒಪ್ಪಿರಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಮಾನಸಿಕವಾಗಿ ಕುಗ್ಗಿದ್ದ ಮಣಿಕಂಠ ಅವರು ಜುಲೈ 17ರ ಸಂಜೆ ತುಂಗಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಘಟನೆಯನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕ ದಳ ಹಾಗೂ ನ್ಯಾಮತಿ ಪೊಲೀಸರಿಗೆ ಮಾಹಿತಿ ನೀಡಿದರು. ತಕ್ಷಣವೇ ಶೋಧ ಕಾರ್ಯಾಚರಣೆ ಆರಂಭಿಸಿದ ರಕ್ಷಣಾ ಸಿಬ್ಬಂದಿ, ಮರುದಿನ ಬೆಳಗ್ಗೆ ಸಗಟೂರು ಗ್ರಾಮದ ಬಳಿ ಮಣಿಕಂಠ ಅವರ ಮೃತದೇಹವನ್ನು ಪತ್ತೆಹಚ್ಚಿದರು.

ಮಣಿಕಂಠ ಅವರು ಸಾವಿಗೆ ಮುನ್ನ ಬರೆದಿಟ್ಟಿರುವ ಡೆತ್ ನೋಟ್‌ ಕೂಡ ಪತ್ತೆಯಾಗಿದ್ದು, ಅದರಲ್ಲಿ ತಮ್ಮ ಪತ್ನಿ ಹಾಗೂ ಆಕೆಯ ಪ್ರಿಯಕರನ ವರ್ತನೆಯಿಂದ ತೀವ್ರವಾಗಿ ನೊಂದಿರುವುದಾಗಿ ಉಲ್ಲೇಖಿಸಿದ್ದಾರೆ. ಜೊತೆಗೆ, “ನನ್ನ ಸಾವಿಗೆ ನಾನೇ ಕಾರಣ, ಬೇರೆ ಯಾರೂ ಹೊಣೆಗಾರರಲ್ಲ” ಎಂದು ಬರೆದಿದ್ದಾರೆ ಎಂದು ತಿಳಿದುಬಂದಿದೆ.

ಇದೀಗ ಮೃತನ ಕುಟುಂಬಸ್ಥರು ಮಣಿಕಂಠ ಅವರ ಪತ್ನಿ ಹಾಗೂ ಆಕೆಯ ಪ್ರಿಯಕರ ವಿರುದ್ಧ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣದ ಎಲ್ಲಾ ಆಯಾಮಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Related News

error: Content is protected !!