ನಾಸಿಕ್: ಪ್ರೀತಿಯ ಹೆಸರಿನಲ್ಲಿ ನಡೆಯುವ ಉನ್ಮಾದಕ್ಕೆ ಮತ್ತೊಂದು ಯುವತಿ ಬಲಿಯಾಗಿರುವ ಘಟನೆ ಮಹಾರಾಷ್ಟ್ರದ ನಾಸಿಕ್‌ನಲ್ಲಿ ನಡೆದಿದೆ. ಮಾಜಿ ಪ್ರೇಯಸಿ ಬೇರೊಬ್ಬ ಯುವಕನೊಂದಿಗೆ ಮದುವೆಯಾಗಲಿರುವ ವಿಚಾರದಿಂದ ಆಕ್ರೋಶಗೊಂಡಿದ್ದ ಯುವಕ, ಆಕೆಯನ್ನು ಚಾಕುವಿನಿಂದ ಬರ್ಬರವಾಗಿ ಹತ್ಯೆಗೈದು, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತ ಯುವತಿಯನ್ನು ಅಮರಾವತಿ ಜಿಲ್ಲೆಯ ವೈಷ್ಣವಿ ಎಂದು ಗುರುತಿಸಲಾಗಿದ್ದು, ಆರೋಪಿ ಆಕೆಯ ಮಾಜಿ ಪ್ರಿಯತಮ ಸಾಹಿಲ್ ಲವ್ಹಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವೈಷ್ಣವಿಗೆ ಇತ್ತೀಚೆಗೆ ಮತ್ತೊಬ್ಬ ಯುವಕನೊಂದಿಗೆ ನಿಶ್ಚಿತಾರ್ಥವಾಗಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಸಾಹಿಲ್, ಶುಕ್ರವಾರ ರಾತ್ರಿ ನಾಸಿಕ್‌ನ ಇಂದಿರಾನಗರದ ವನಸಂಪದ ಗಾರ್ಡನ್ ಬಳಿ ವೈಷ್ಣವಿಯನ್ನು ಭೇಟಿಯಾಗಿದ್ದಾನೆ.
ಘಟನೆಯ ವೇಳೆ ವೈಷ್ಣವಿ ತನ್ನ ಭಾವಿ ಪತಿಗೆ ಕರೆ ಮಾಡಿ, “ಸಾಹಿಲ್ ಇಲ್ಲಿದ್ದಾನೆ, ಬೇಗ ಬನ್ನಿ” ಎಂದು ಆತಂಕ ವ್ಯಕ್ತಪಡಿಸಿದ್ದಳು. ಸುಮಾರು 22 ನಿಮಿಷಗಳ ಕಾಲ ಕರೆ ಸಂಪರ್ಕದಲ್ಲೇ ಇತ್ತು. ಈ ವೇಳೆ ಸಾಹಿಲ್ ಮತ್ತು ವೈಷ್ಣವಿ ನಡುವೆ ನಡೆದ ತೀವ್ರ ವಾಗ್ವಾದವನ್ನು ಆಕೆಯ ಭಾವಿ ಪತಿ ಫೋನ್ ಮೂಲಕವೇ ಕೇಳುತ್ತಾ ಸ್ಥಳಕ್ಕೆ ಧಾವಿಸುತ್ತಿದ್ದರು. ಆದರೆ, ಅವರು ತಲುಪುವ ಮುನ್ನವೇ ಸಾಹಿಲ್ ವೈಷ್ಣವಿಯ ಮೇಲೆ ಚಾಕುವಿನಿಂದ ಹಲವು ಬಾರಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವೈಷ್ಣವಿಯನ್ನು ಕೊಂದ ಬಳಿಕ ಸಾಹಿಲ್, ಆಕೆಯ ಭಾವಿ ಪತಿಗೆ ಕರೆ ಮಾಡಿ, “ವೈಶು ಕಥೆ ಮುಗಿಯಿತು” ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ಆಗಮಿಸಿದಾಗ ವೈಷ್ಣವಿ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಆಗಲೇ ಮೃತಪಟ್ಟಿದ್ದಳು.
ಕೆಲವು ಗಂಟೆಗಳ ಬಳಿಕ ಘಟನಾ ಸ್ಥಳದಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿ ಸಾಹಿಲ್ ಮೃತದೇಹ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೊಲೆ ನಡೆಸಿದ ಬಳಿಕ ಆತ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಈ ನಡುವೆ, ವೈಷ್ಣವಿಯ ಮದುವೆ ನಿಶ್ಚಯವಾಗಿರುವ ಮಾಹಿತಿ ಸಾಹಿಲ್‌ಗೆ ಹೇಗೆ ತಿಳಿಯಿತು ಹಾಗೂ ಈ ವಿಷಯವನ್ನು ಆತನಿಗೆ ಯಾರು ತಿಳಿಸಿದ್ದರು ಎಂಬ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ದುರ್ಘಟನೆಯು ಅತಿರೇಕದ ಪ್ರೀತಿಯ ಪರಿಣಾಮವಾಗಿ ಎರಡು ಜೀವಗಳನ್ನು ಬಲಿ ಪಡೆದಿದ್ದು, ನಾಸಿಕ್‌ನಲ್ಲಿ ಆತಂಕಕ್ಕೆ ಕಾರಣವಾಗಿದೆ.
