ಸೂರ್ಯಾಪೇಟೆ: ಅನೈತಿಕ ಸಂಬಂಧಕ್ಕೆ ಪತಿ ಅಡ್ಡಿಯಾಗಿದ್ದಾನೆ ಎಂಬ ಕಾರಣಕ್ಕೆ ಪತಿಯನ್ನೇ ಕೊಲೆ ಮಾಡಲು ಪತ್ನಿ ಹಾಗೂ ಆಕೆಯ ಕುಟುಂಬಸ್ಥರು ಸಂಚು ರೂಪಿಸಿದ್ದಾರೆ ಎನ್ನಲಾದ ಆಘಾತಕಾರಿ ಪ್ರಕರಣ ತೆಲಂಗಾಣದ ಸೂರ್ಯಾಪೇಟೆ ಮಂಡಲದ ದುಬ್ಬತಂಡಾದಲ್ಲಿ ಬೆಳಕಿಗೆ ಬಂದಿದೆ. ತನ್ನ ಹತ್ಯೆಗೆ ಸಂಚು ನಡೆಯುತ್ತಿದೆ ಎಂದು ಆರೋಪಿಸಿರುವ ಪತಿ, ಪ್ರಿಯಕರನ ಮೊಬೈಲ್‌ನಲ್ಲಿದ್ದ ಸಾಕ್ಷ್ಯಗಳೊಂದಿಗೆ ಪೊಲೀಸರ ಮೊರೆ ಹೋಗಿದ್ದಾರೆ.

13 ವರ್ಷದ ದಾಂಪತ್ಯದಲ್ಲಿ ಬಿರುಕು

ದುಬ್ಬತಂಡಾ ಗ್ರಾಮದ ಧರಾವತ್ ಸತೀಶ್ ಮತ್ತು ಶಿಲ್ಪಾ 13 ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆರಂಭದಲ್ಲಿ ಅನ್ಯೋನ್ಯವಾಗಿದ್ದ ಸಂಸಾರದಲ್ಲಿ ಕೆಲ ವರ್ಷಗಳ ಬಳಿಕ ಬಿರುಕು ಕಾಣಿಸಿಕೊಂಡಿದೆ ಎನ್ನಲಾಗಿದೆ.

ಮದುವೆಗೂ ಮುನ್ನ ಟಿವಿ ವರದಿಗಾರನಾಗಿದ್ದ ವೆಂಕಟರೆಡ್ಡಿ ಎಂಬಾತನೊಂದಿಗೆ ಶಿಲ್ಪಾಗೆ ಪರಿಚಯವಿತ್ತು. ಮದುವೆಯಾದ ಬಳಿಕವೂ ಇಬ್ಬರ ನಡುವಿನ ಸಂಬಂಧ ಮುಂದುವರಿದಿತ್ತು ಎಂದು ಸತೀಶ್ ಆರೋಪಿಸಿದ್ದಾರೆ.

ಆಸ್ತಿ ಮೇಲೆ ಕಣ್ಣು? ಪತಿ ಹತ್ಯೆಗೆ ಸಂಚು ಆರೋಪ

ಪತಿಯ ಆಸ್ತಿಯನ್ನು ಪಡೆಯಲು ಹಾಗೂ ಪ್ರಿಯಕರನೊಂದಿಗೆ ಜೀವನ ನಡೆಸಲು ಶಿಲ್ಪಾ ತನ್ನ ಪತಿಯನ್ನು ದೂರ ಮಾಡಲು ಸಂಚು ರೂಪಿಸಿದ್ದಾಳೆ ಎಂಬುದು ಸತೀಶ್ ಅವರ ಆರೋಪ. ಅಲ್ಲದೆ, ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲು ಕೂಡ ಪ್ರಯತ್ನಿಸಲಾಗಿತ್ತು ಎಂದು ಅವರು ದೂರಿದ್ದಾರೆ.

ಕಳೆದ ಏಪ್ರಿಲ್‌ನಲ್ಲಿ ರಜೆಯ ನೆಪದಲ್ಲಿ ಮಕ್ಕಳನ್ನು ಕರೆದುಕೊಂಡು ಶಿಲ್ಪಾ ನಾಪತ್ತೆಯಾಗಿದ್ದಳು ಎನ್ನಲಾಗಿದೆ. ಇತ್ತೀಚೆಗೆ ಸೂರ್ಯಾಪೇಟೆಗೆ ಬಂದಿದ್ದ ಸತೀಶ್‌ಗೆ ಪತ್ನಿ ಶಿಲ್ಪಾ ಮತ್ತು ವೆಂಕಟರೆಡ್ಡಿ ಒಟ್ಟಿಗೆ ಸಿಕ್ಕಿಬಿದ್ದಿದ್ದಾರೆ.

ಪ್ರಿಯಕರನ ಮೊಬೈಲ್‌ನಲ್ಲಿ ಸಿಕ್ಕಿತಂತೆ ಬೆಚ್ಚಿಬೀಳಿಸುವ ಸಾಕ್ಷ್ಯ!

ಈ ವೇಳೆ ವೆಂಕಟರೆಡ್ಡಿಯ ಮೊಬೈಲ್ ಪರಿಶೀಲಿಸಿದಾಗ ಸತೀಶ್ ಅವರನ್ನು ಹೇಗೆ ಹತ್ಯೆ ಮಾಡಬೇಕು ಎಂಬುದರ ಕುರಿತು ಚರ್ಚೆ ಹಾಗೂ ಸಂಚಿಗೆ ಸಂಬಂಧಿಸಿದ ವಿಡಿಯೋಗಳು ಪತ್ತೆಯಾಗಿವೆ ಎಂದು ಸತೀಶ್ ಆರೋಪಿಸಿದ್ದಾರೆ.

ಇದರ ಜೊತೆಗೆ ಶಿಲ್ಪಾ ಮತ್ತು ವೆಂಕಟರೆಡ್ಡಿಗೆ ಸಂಬಂಧಿಸಿದ ಖಾಸಗಿ ವಿಡಿಯೋಗಳು ಕೂಡ ಮೊಬೈಲ್‌ನಲ್ಲಿ ಪತ್ತೆಯಾಗಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ತನ್ನ ಮೇಲೆ ಹಲ್ಲೆ ಅಥವಾ ಹತ್ಯೆ ನಡೆಸಲು ರಾತ್ರಿ ವೇಳೆ ಓಡಾಟ ಹಾಗೂ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸತೀಶ್ ಆತಂಕ ವ್ಯಕ್ತಪಡಿಸಿದ್ದಾರೆ.

ಅಪ್ರಾಪ್ತ ಮಗಳ ಮೇಲೂ ಅನುಚಿತ ವರ್ತನೆ ಆರೋಪ

ಇಷ್ಟಕ್ಕೇ ಪ್ರಕರಣ ಮುಗಿದಿಲ್ಲ. ವೆಂಕಟರೆಡ್ಡಿ ತನ್ನ ಅಪ್ರಾಪ್ತ ಮಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂಬ ಮತ್ತೊಂದು ಗಂಭೀರ ಆರೋಪವನ್ನೂ ಸತೀಶ್ ಮಾಡಿದ್ದಾರೆ.

ಈ ಘಟನೆ ನಲ್ಗೊಂಡ ಜಿಲ್ಲೆಯ ಹಾಲಿಯಾ ಪೊಲೀಸ್ ಠಾಣೆ ವ್ಯಾಪ್ತಿಗೆ ಸಂಬಂಧಿಸಿದ್ದರಿಂದ, ಸೂರ್ಯಾಪೇಟೆ ಗ್ರಾಮಾಂತರ ಪೊಲೀಸರು ವೆಂಕಟರೆಡ್ಡಿ ವಿರುದ್ಧ ಪೋಕ್ಸೋ ಹಾಗೂ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಝೀರೋ ಎಫ್‌ಐಆರ್ ದಾಖಲಿಸಿ ಪ್ರಕರಣವನ್ನು ಹಾಲಿಯಾ ಠಾಣೆಗೆ ವರ್ಗಾಯಿಸಿದ್ದಾರೆ.

ತನ್ನ ಹಾಗೂ ಮಕ್ಕಳಿಗೆ ಸೂಕ್ತ ರಕ್ಷಣೆ ನೀಡಬೇಕು ಮತ್ತು ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸತೀಶ್ ಪೊಲೀಸರಿಗೆ ಮನವಿ ಮಾಡಿದ್ದಾರೆ.

ಪತಿಯ ಹತ್ಯೆಗೆ ಸಂಚು, ಮೊಬೈಲ್‌ನಲ್ಲಿ ಪತ್ತೆಯಾದ ಎನ್ನಲಾದ ಸಾಕ್ಷ್ಯಗಳು ಹಾಗೂ ಅಪ್ರಾಪ್ತೆಯ ಮೇಲಿನ ಆರೋಪ—ಈ ಪ್ರಕರಣ ಇದೀಗ ಹಲವು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದಲೇ ಬಹಿರಂಗವಾಗಬೇಕಿದೆ.

Related News

error: Content is protected !!