
ಗೌರಿಬಿದನೂರು: ರೈಲ್ವೆ ಇಲಾಖೆಯ ಕಾಮಗಾರಿ ಕೆಲಸಕ್ಕೆ ತೆರಳುತ್ತಿದ್ದ ಕೂಲಿ ಕಾರ್ಮಿಕರಿದ್ದ ಬೊಲೆರೋ ವಾಹನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿಯಾದ ಪರಿಣಾಮ ಎಂಟು ಮಂದಿ ಕಾರ್ಮಿಕರು ತೀವ್ರವಾಗಿ ಗಾಯಗೊಂಡಿರುವ ಘಟನೆ ಗೌರಿಬಿದನೂರು ನಗರದ ಗುಂಡಾಪುರ ಹೊಸ ಬೈಪಾಸ್ ಸಮೀಪ ನಡೆದಿದೆ.
ಗೌರಿಬಿದನೂರು ತಾಲೂಕಿನ ಹಳೆ ಉಪ್ಪಾರಹಳ್ಳಿ ಉಪ್ಪಾರಲಿಯಿಂದ ದೊಡ್ಡಬಳ್ಳಾಪುರದ ಕಡೆಗೆ ರೈಲ್ವೆ ಇಲಾಖೆಯ ಕಾಮಗಾರಿ ಕೆಲಸಕ್ಕೆ ತೆರಳಲು ಒಡಿಶಾ ಮೂಲದ ಒಟ್ಟು 11 ಮಂದಿ ಕೂಲಿ ಕಾರ್ಮಿಕರು ಬೊಲೆರೋ ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಗುಂಡಾಪುರ ಹೊಸ ಬೈಪಾಸ್ ಸಮೀಪ ವಾಹನ ಏಕಾಏಕಿ ಅಪಘಾತಕ್ಕೀಡಾಗಿದೆ.
ಅಪಘಾತದ ಪರಿಣಾಮ ವಾಹನದಲ್ಲಿದ್ದ ಎಂಟು ಮಂದಿ ಕಾರ್ಮಿಕರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ಗಾಯಾಳುಗಳ ನೆರವಿಗೆ ಧಾವಿಸಿ, ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲು ಸಹಕರಿಸಿದ್ದಾರೆ. ಗಾಯಾಳುಗಳಲ್ಲಿ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದವರನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಬೊಲೆರೋ ವಾಹನವು ಅತಿವೇಗವಾಗಿ ಸಂಚರಿಸುತ್ತಿದ್ದ ವೇಳೆ ವಾಹನದ ಮುಂದಿನ ಚಕ್ರ ಏಕಾಏಕಿ ಒಡೆದಿದೆ ಎನ್ನಲಾಗಿದೆ. ಇದರಿಂದ ಚಾಲಕನ ನಿಯಂತ್ರಣ ತಪ್ಪಿದ ವಾಹನ ರಸ್ತೆ ಬದಿಗೆ ಉರುಳಿ, ಮೂರುರಿಂದ ನಾಲ್ಕು ಬಾರಿ ಪಲ್ಟಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಅಪಘಾತದ ರಭಸಕ್ಕೆ ಬೊಲೆರೋ ವಾಹನಕ್ಕೂ ಸಾಕಷ್ಟು ಹಾನಿಯಾಗಿದ್ದು, ಅದರಲ್ಲಿದ್ದ ಕಾರ್ಮಿಕರಿಗೆ ಗಂಭೀರ ಗಾಯಗಳಾಗಿವೆ. ಘಟನೆ ಸಂಭವಿಸುತ್ತಿದ್ದಂತೆ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳೀಯರ ಸಮಯಪ್ರಜ್ಞೆಯಿಂದ ಗಾಯಾಳುಗಳನ್ನು ತ್ವರಿತವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆದರೆ ಅಪಘಾತಕ್ಕೆ ನಿಖರ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವಾಹನದ ಅತಿವೇಗ, ಚಕ್ರದ ತಾಂತ್ರಿಕ ದೋಷ ಅಥವಾ ಮತ್ತಾವುದೇ ಕಾರಣದಿಂದ ಅಪಘಾತ ಸಂಭವಿಸಿದೆಯೇ ಎಂಬುದರ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ದೂರದ ಒಡಿಶಾದಿಂದ ರೈಲ್ವೆ ಕಾಮಗಾರಿಗಾಗಿ ಗೌರಿಬಿದನೂರಿಗೆ ಆಗಮಿಸಿದ್ದ ಕಾರ್ಮಿಕರು ಅಪಘಾತಕ್ಕೀಡಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಗಾಯಗೊಂಡಿರುವ ಕಾರ್ಮಿಕರ ಆರೋಗ್ಯ ಸ್ಥಿತಿ ಹಾಗೂ ಅಪಘಾತದ ನಿಖರ ಕಾರಣದ ಕುರಿತು ಪೊಲೀಸ್ ತನಿಖೆಯಿಂದ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಸಂಗ್ರಹಿಸುತ್ತಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.
ವರದಿ: ಅವಿನಾಶ್






