ಹಳಿಯಾಳ (ಉತ್ತರ ಕನ್ನಡ): ಪೊಲೀಸ್ ಇಲಾಖೆಯಲ್ಲಿ ಪ್ರಮುಖ ಹುದ್ದೆ ಪಡೆಯಲು ಲಂಚದ ವ್ಯವಹಾರ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಆಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯ ಮೂವರು ಪಿಎಸ್‌ಐಗಳನ್ನು ಅಮಾನತುಗೊಳಿಸಲಾಗಿದೆ.

ಪಿಎಸ್‌ಐಗಳಾದ ಕಿರಣ್ ಪಾಟೀಲ್, ಕೃಷ್ಣ ಅರಗೇರಿ ಹಾಗೂ ವಿನೋದ್ ರೆಡ್ಡಿ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ದೀಪನ್ ಆದೇಶ ಹೊರಡಿಸಿದ್ದಾರೆ.

ಮೂವರೂ ಸ್ನೇಹಿತರಾಗಿದ್ದು, ಹಳಿಯಾಳ ಪಿಎಸ್‌ಐ ಹುದ್ದೆ ಸೇರಿದಂತೆ ಪೊಲೀಸ್ ಇಲಾಖೆಯ ವಿವಿಧ ವಿಚಾರಗಳ ಕುರಿತು ಚರ್ಚಿಸಿರುವ ಸುಮಾರು ಎರಡು ನಿಮಿಷಗಳ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ ಎನ್ನಲಾಗಿದೆ. ಆಡಿಯೋದಲ್ಲಿ ಹುದ್ದೆ ಪಡೆಯಲು ಹಣದ ವ್ಯವಹಾರ ನಡೆದಿರುವ ಕುರಿತು ಚರ್ಚೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

ಆಡಿಯೋ ವೈರಲ್ ಆದ ಬೆನ್ನಲ್ಲೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ, ಮೂವರು ಪಿಎಸ್‌ಐಗಳ ವಿರುದ್ಧ ಕ್ರಮ ಕೈಗೊಂಡಿದೆ. ಜೊತೆಗೆ ಪ್ರಕರಣದ ಕುರಿತು ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ.

ವೈರಲ್ ಆಗಿರುವ ಆಡಿಯೋ ನೈಜವೇ? ಅದರಲ್ಲಿ ಕೇಳಿಬರುವ ಆರೋಪಗಳಿಗೆ ಎಷ್ಟು ಸತ್ಯಾಸತ್ಯತೆ ಇದೆ? ಹುದ್ದೆಗಾಗಿ ನಿಜವಾಗಿಯೂ ಲಂಚದ ವ್ಯವಹಾರ ನಡೆದಿತ್ತೇ ಎಂಬುದರ ಬಗ್ಗೆ ಇಲಾಖಾ ತನಿಖೆಯ ಬಳಿಕವಷ್ಟೇ ಸ್ಪಷ್ಟ ಚಿತ್ರಣ ದೊರೆಯಲಿದೆ.

Related News

error: Content is protected !!