ಬೆಳಗಾವಿ: ಅಪಾರ ಮೌಲ್ಯದ ಜಮೀನಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ತಾನೇ ಆಸ್ತಿಯ ನಿಜವಾದ ಮಾಲೀಕರಂತೆ ಬಿಂಬಿಸಿಕೊಂಡು ಅಕ್ರಮವಾಗಿ ಮಾರಾಟ ಮಾಡಿದ್ದ ಆರೋಪದ ಮೇಲೆ 80 ವರ್ಷದ ವೃದ್ಧೆಯನ್ನು ಬೆಳಗಾವಿಯ ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತೆಯನ್ನು ವಡಗಾಂವ ಗಣೇಶ ಕಾಲೋನಿ ನಿವಾಸಿ ಮಂದಾಕಿನಿ ಪರಿಶವಾಡಕರ ಎಂದು ಗುರುತಿಸಲಾಗಿದೆ.

ಕಣಬರ್ಗಿ ರಸ್ತೆಯ ಮಹಾಂತೇಶ ನಗರದಲ್ಲಿರುವ ಪ್ಲಾಟ್ ಹಾಗೂ ಸಿಟಿಎಸ್ ಸಂಖ್ಯೆಯ ಜಾಗವು ರತ್ನಾ ಯಶವಂತ ಮಲ್ಲೂಕರ ಅವರಿಗೆ ಸೇರಿದ್ದಾಗಿತ್ತು. ಈ ಆಸ್ತಿಯನ್ನು ಕಬಳಿಸುವ ಉದ್ದೇಶದಿಂದ ಮಂದಾಕಿನಿ, ತಾನೇ ರತ್ನಾ ಮಲ್ಲೂಕರ ಎಂಬಂತೆ ಬಿಂಬಿಸಿಕೊಂಡು ನಕಲಿ ದಾಖಲೆಗಳನ್ನು ಸಿದ್ಧಪಡಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

2023ರ ಸೆಪ್ಟೆಂಬರ್ 16ರಂದು ಬೆಳಗಾವಿ ಉತ್ತರ ಉಪನೋಂದಣಾಧಿಕಾರಿ ಕಚೇರಿಗೆ ತೆರಳಿದ್ದ ಆರೋಪಿ, ನಿಜವಾದ ಮಾಲೀಕರಂತೆ ನಟಿಸಿ ವೆಬ್‌ಕ್ಯಾಮ್ ಮುಂದೆ ಫೋಟೊ ತೆಗೆಸಿಕೊಂಡಿದ್ದಾಳೆ. ಬಳಿಕ ಹೆಬ್ಬೆರಳ ಗುರುತು ಹಾಗೂ ಸಹಿ ಹಾಕಿ, ಜಮೀನನ್ನು ಬೇರೊಬ್ಬರ ಹೆಸರಿಗೆ ಮಾರಾಟ ಮಾಡುವಂತೆ ನಕಲಿ ಸೇಲ್‌ಡೀಡ್ ಮಾಡಿಕೊಟ್ಟಿದ್ದಾಳೆ ಎನ್ನಲಾಗಿದೆ.

ತಮ್ಮ ಜಮೀನು ವಂಚನೆಯ ಮೂಲಕ ಮಾರಾಟವಾಗಿರುವ ವಿಚಾರ ತಿಳಿದುಬಂದ ಬಳಿಕ ನಿಜವಾದ ಮಾಲೀಕ ರತ್ನಾ ಅವರು 2025ರ ಫೆಬ್ರವರಿಯಲ್ಲಿ ಮಾರ್ಕೆಟ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.

ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಮಂದಾಕಿನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ವಂಚನೆಯ ಸಂಪೂರ್ಣ ಜಾಲ ಬೆಳಕಿಗೆ ಬಂದಿದೆ.

ಈ ಕೃತ್ಯಕ್ಕೆ ಸಹಕರಿಸಿದ ಆರೋಪದ ಮೇಲೆ ಕಾಕತಿಯ ಸಿದ್ದೇಶ್ವರ ನಗರದ ನಿವಾಸಿ ರಾಹುಲ್ ಅನೀಲ ಮಗದುಮ್ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಈತ ಇತರೆ ಪ್ರಕರಣಗಳಲ್ಲಿಯೂ ತಲೆಮರೆಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿಯ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ನಕಲಿ ದಾಖಲೆ ಸೃಷ್ಟಿಸಿ, ನಿಜವಾದ ಮಾಲೀಕರಂತೆ ನಟಿಸಿ ನೋಂದಣಿ ಕಚೇರಿಯಲ್ಲೇ ಜಮೀನು ಮಾರಾಟ ಮಾಡಿರುವ ಈ ಪ್ರಕರಣ ಇದೀಗ ಬೆಳಗಾವಿಯಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

Related News

error: Content is protected !!