ಮುಂಡಗೋಡ: ಅರಣ್ಯ ವಲಯದ ಇಂದೂರು ಶಾಖೆಯ ನಂದಿಕಟ್ಟ ಗಸ್ತು ವ್ಯಾಪ್ತಿಯಲ್ಲಿ ಜುಲೈ 17ರಂದು ಪತ್ತೆಯಾದ ಅಕ್ರಮ ಜಿಂಕೆ ಮಾಂಸ ಪ್ರಕರಣದ ಪ್ರಮುಖ ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶಿವಮೊಗ್ಗ ಜಿಲ್ಲೆಯ ಆನವಟ್ಟಿ ಗ್ರಾಮದಲ್ಲಿ ಬಂಧಿಸಿ ನ್ಯಾಯಾಂಗ ಪ್ರಕ್ರಿಯೆಗೆ ಒಳಪಡಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಆರೋಪಿ ರಮೇಶ್ ಅವರನ್ನು ಜುಲೈ 17ರಂದೇ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಆದರೆ ಮತ್ತೋರ್ವ ಪ್ರಮುಖ ಆರೋಪಿ ವಸಂತ ಕೊರವರ್ (ಗಾಂಧಿನಗರ, ಮುಂಡಗೋಡ) ಪ್ರಕರಣದ ಬಳಿಕ ಶಿವಮೊಗ್ಗ ಜಿಲ್ಲೆಗೆ ಪರಾರಿಯಾಗಿದ್ದನು.
ಆರೋಪಿಯ ಪತ್ತೆಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಸತತ 50 ಗಂಟೆಗಳ ಕಾಲ ವಿವಿಧ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿದರು. ಖಚಿತ ಮಾಹಿತಿ ಆಧರಿಸಿ ಜುಲೈ 19ರಂದು ಶಿವಮೊಗ್ಗ ಜಿಲ್ಲೆಯ ಆನವಟ್ಟಿಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ಬಂಧಿತ ಆರೋಪಿಯನ್ನು ನ್ಯಾಯಾಂಗ ಪ್ರಕ್ರಿಯೆಗೆ ಒಳಪಡಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತನಿಖೆ ಹಾಗೂ ಕಾರ್ಯಾಚರಣೆ ಮುಂದುವರಿದಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಯಶಸ್ವಿ ಕಾರ್ಯಾಚರಣೆಯು ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಶ್ರೀ ಅಜೀಜ್ ಶೇಖ್ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಶ್ರೀ ಈರೇಶ್ ಕಬ್ಬಿನ ಅವರ ಮಾರ್ಗದರ್ಶನದಲ್ಲಿ, ಮುಂಡಗೋಡ ವಲಯ ಅರಣ್ಯಾಧಿಕಾರಿ ಶ್ರೀ ಅಪ್ಪಾರಾವ್ ಕಲಶೆಟ್ಟಿ ಅವರ ನೇತೃತ್ವದಲ್ಲಿ ನಡೆಯಿತು.
ಕಾರ್ಯಾಚರಣೆಯಲ್ಲಿ ಡಿಆರ್‌ಎಫ್‌ಒಗಳಾದ ಕು. ಸುನೀತಾ, ರಾಕೇಶ್ ಆನವೇರಿ, ಅರ್ಜುನ್ ಮೊರಬ ಹಾಗೂ ಗಸ್ತು ಅರಣ್ಯ ಪಾಲಕರಾದ ಅಮಿತ ಸಣ್ಣಕ್ಕಿ, ಮುಸ್ತಾಕ್ ಅಲಿ, ಮರ್ದಾನ್ ಅಲಿ, ಸಂತೋಷ್, ರಾಘವೇಂದ್ರ, ಶಿವಾನಂದ ಸೇರಿದಂತೆ ಇತರ ಸಿಬ್ಬಂದಿ ಭಾಗವಹಿಸಿದ್ದರು.
