ಮಾಗಡಿ ಕಾಂಗ್ರೆಸ್ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ತಮ್ಮ ಹೇಳಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿ, ತಮ್ಮ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಸಂಪೂರ್ಣ ವಿಷಾದ ವ್ಯಕ್ತಪಡಿಸುವುದಾಗಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ತಾವು ಸದಾ ಗೌರವದಿಂದ “ಶೋಭಕ್ಕ” ಎಂದು ಸಂಬೋಧಿಸಿದ್ದೇನೆ ಎಂದು ಹೇಳಿದರು. ಬಿಡದಿ ಟೌನ್‌ಶಿಪ್ ಯೋಜನೆಗೆ 2010ರಲ್ಲಿ ಟೆಂಡರ್ ಕರೆಯಲಾಗಿತ್ತು. ಆ ಸಂದರ್ಭದಲ್ಲಿ ರಾಜಕೀಯ ಹಿನ್ನೆಲೆಯ ಉಲ್ಲೇಖವಾಗಿ “ನಿಮ್ಮ ಸಾಹೇಬ”, “ನಿಮ್ಮ ಯಜಮಾನ” ಎಂಬ ಪದಗಳನ್ನು ಬಳಸಿದ್ದೇನೆ ಎಂದು ವಿವರಿಸಿದರು.
ಶೋಭಾ ಕರಂದ್ಲಾಜೆ ಅವರನ್ನು ಸಾಮಾನ್ಯ ಕಾರ್ಯಕರ್ತೆಯಾಗಿ ಗುರುತಿಸಿ, ಸಚಿವೆಯನ್ನಾಗಿ ಬೆಳೆಸಿದ ನಾಯಕ ಬಿ.ಎಸ್. ಯಡಿಯೂರಪ್ಪ ಎಂಬ ರಾಜಕೀಯ ಸಂದರ್ಭವನ್ನು ಉಲ್ಲೇಖಿಸುವ ಉದ್ದೇಶದಿಂದ ಮಾತ್ರ ಆ ಪದಗಳನ್ನು ಬಳಸಿದ್ದೇನೆ. ಯಾವುದೇ ವೈಯಕ್ತಿಕ ಅವಹೇಳನ ಮಾಡುವ ಉದ್ದೇಶ ನನಗಿರಲಿಲ್ಲ ಎಂದು ಬಾಲಕೃಷ್ಣ ಸ್ಪಷ್ಟಪಡಿಸಿದರು.
ಸಾರ್ವಜನಿಕ ಜೀವನದಲ್ಲಿರುವವರು ಹೇಳಿಕೆಗಳ ಆಶಯವನ್ನು ಸರಿಯಾದ ಸಂದರ್ಭದಲ್ಲಿ ಅರ್ಥೈಸಿಕೊಳ್ಳಬೇಕು. ಆದಾಗ್ಯೂ, ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ನಾನು ಸಂಪೂರ್ಣವಾಗಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಅವರು ಹೇಳಿದರು.
ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಕಾಂಗ್ರೆಸ್ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ಸುದ್ದಿಗೋಷ್ಠಿಯಲ್ಲಿ ಶೋಭಾ ಕರಂದ್ಲಾಜೆ ಅವರ ಬಗ್ಗೆ ಬಳಸಿದ ಭಾಷೆ ಅಸಭ್ಯತೆಯ ಪರಮಾವಧಿಯಾಗಿದ್ದು, ಅದು ಮಹಿಳೆಯರಿಗೆ ಅಗೌರವ ತೋರುವ ಕಾಂಗ್ರೆಸ್‌ನ ನಿಜವಾದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಟೀಕಿಸಿದರು.
ಮಹಿಳಾ ಜನಪ್ರತಿನಿಧಿಯೊಬ್ಬರ ಕುರಿತು ಏಕವಚನದಲ್ಲಿ ಸಂವೇದನಾರಹಿತವಾಗಿ ಮಾತನಾಡಿರುವುದು ಖಂಡನೀಯ. ಬಾಲಕೃಷ್ಣ ಅವರು ಮಹಿಳಾ ಸಮುದಾಯದ ಕ್ಷಮೆಯಾಚಿಸಬೇಕು ಎಂದು ಪ್ರಹ್ಲಾದ ಜೋಶಿ ಆಗ್ರಹಿಸಿದರು.
