
ಬಡವರ್ಗದ ಜನರಿಗೆ ಕುಡಿದಿನ, ಕೂಲಿಕಾರ್ಮಿಕರು, ಹಮಾಲಿಗಳು, ಬೀದಿ ವ್ಯಾಪಾರಿಗಳು ಹಾಗೂ ಆಸ್ಪತ್ರೆಗೆ ಬರುವ ರೋಗಿಗಳಿಗೆ ತಿಂಡಿ–ಊಟದ ವಿಲ್ಲದ ಬದುಕು ಕಲ್ಪಿಸಲು ಸರ್ಕಾರ ಆರಂಭಿಸಿದ್ದ ಇಂದಿರಾ ಕ್ಯಾಂಟೀನ್ ಯೋಜನೆ, ವರ್ಷಗಳ ಬಳಿಕ ದಿನದಿಂದ ದಿನಕ್ಕೆ ಗುಣಮಟ್ಟ ಕಳೆದುಕೊಳ್ಳುತ್ತಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದ ಬಿ.ಎಚ್ ರಸ್ತೆಯಲ್ಲಿ ಇರುವ ಇಂದಿರಾ ಕ್ಯಾಂಟೀನ್ ಇದೀಗ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ. ತಿಂಗಳುಗಳಿಂದ ಫ್ರಿಡ್ಜ್ ಕೆಲಸ ಮಾಡುತ್ತಿಲ್ಲ. ಅದರೊಳಗೆ ತರಕಾರಿ ಇಡುವ ಬದಲು ಖಾಲಿ ಪ್ಲಾಸ್ಟಿಕ್ ಚೀಲಗಳನ್ನು ತುಂಬಲಾಗುತ್ತಿದ್ದು, ಫ್ರಿಡ್ಜ್ ಬಳಕೆಯಿಲ್ಲದ ಸ್ಥಿತಿಗೆ ತಲುಪಿದೆ. ಹಾಗೆಯೇ ವಾಟರ್ ಫಿಲ್ಟರ್ ಕೂಡ ನಿಷ್ಕ್ರಿಯವಾಗಿದ್ದು, ಸಾರ್ವಜನಿಕರಿಗೆ ಶುದ್ಧ ನೀರು ಲಭ್ಯವಿಲ್ಲ ಎಂಬ ಅನುಮಾನ ಮೂಡಿಸುತ್ತಿದೆ.
ಅದಕ್ಕೂ ಹೆಚ್ಚು ಗಂಭೀರವಾದ ವಿಷಯವೇನೆಂದರೆ ಅಡುಗೆ ಯಂತ್ರಗಳು ಧೂಳು ಹಿಡಿದು ನಿಲ್ಲುತ್ತಾ ಹೋಗಿದ್ದು, ಕ್ಯಾಂಟೀನ್‌ನಲ್ಲಿ ಅಲ್ಪ ಪ್ರಮಾಣದ ಅಡುಗೆಯನ್ನಷ್ಟೇ ಸಣ್ಣ ಪಾತ್ರೆಗಳಲ್ಲಿ ಮಾಡಲಾಗುತ್ತಿದೆ. ಕೆಲವೇ ನಿಮಿಷಗಳಲ್ಲಿ ‘ಊಟ ಮುಗಿಯಿತು’ ಎಂಬ ಸಲುವಾಗಿ ಬಡವರನ್ನು ಹಿಂಪಡೆಯಲಾಗುತ್ತಿದೆ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸರ್ಕಾರ ನಿಗದಿಪಡಿಸಿರುವ ಆಹಾರದ ಪ್ರಮಾಣಕ್ಕೆ ಅನುಗುಣವಾಗಿ ತೂಕ ಮಾಡುವ ಯಂತ್ರ ಇದ್ದರೂ, ಅದನ್ನು ಮೂಲೆಗೆ ತಳ್ಳಿರುವ ಕಾರಣ, ಆಹಾರವು ಅಂದಾಜಿನ ಮೇರೆಗೆ ನೀಡಲಾಗುತ್ತಿದೆ. ಇದರೊಂದಿಗೆ ದಿನದ ಪಂಚಿಕೆಯಲ್ಲಿ ಬಡವರ ಹೆಸರು ನೋಂದಾಯಿಸಲು ಉದ್ದೇಶಿಸಿರುವ ಪುಸ್ತಕದಲ್ಲಿಯೂ ಕೆಲವರು ಮಾತ್ರ ಸಹಿ ಮಾಡುತ್ತಿದ್ದಾರೆ, ಉಳಿದ ಸಹಿಗಳನ್ನು ಸಿಬ್ಬಂದಿಯೇ ಹಾಕುತ್ತಿರುವ ಅನುಮಾನ ವ್ಯಕ್ತವಾಗಿದೆ.
“ಇತ್ತೀಚೆಗೆ ಬೆಳಗಿನ ತಿಂಡಿ ಹಾಗೂ ಮಧ್ಯಾಹ್ನದ ಊಟ ನೀಡಲಾಗ ಆದರೆ ಅದು ನೆಪಕ್ಕೆ ಮಾತ್ರ. ರುಚಿಯೂ ಇಲ್ಲ, ಗುಣಮಟ್ಟವೂ ಇಲ್ಲ. ಕೆಲವರಿಗೆ ಕೊಟ್ಟು, ಉಳಿದವರಿಗೆ ಮುಗಿದಿದೆಯೆಂದು ತಿರಸ್ಕರಿಸುತ್ತಾರೆ,” ಎಂದು ಕೂಲಿ ಕಾರ್ಮಿಕ ಗಂಗಪ್ಪ ವಿಷಾದ ವ್ಯಕ್ತಪಡಿಸಿದರು.
ವಿದ್ಯಾರ್ಥಿ ಮನೋಜ್ ಕೂಡ “ಅಡುಗೆ ಮಾಡದೇ ಹೋದ ದಿನ ಕ್ಯಾಂಟೀನ್‌ಗೆ ಹೋಗ್ತೀನಿ. ಆದರೆ ಅಲ್ಲಿ ರುಚಿಯೂ ಇಲ್ಲ, ತರಕಾರಿಯೂ ಇಲ್ಲ. ಹೀಗೆ ಇದ್ದರೆ ಹಸಿವನ್ನು ತಣಿಸಲು ಇನ್ನು ಯಾವತ್ತಿಗೂ ಈ ಯೋಜನೆ ನೆರವಾಗದು,” ಎಂದು ಬೇಸರ ವ್ಯಕ್ತಪಡಿಸುತ್ತಾರೆ.
ಇಂತಹ ಪರಿಸ್ಥಿತಿಯ ಮಧ್ಯೆ, ಸಂಬಂಧಪಟ್ಟ ಅಧಿಕಾರಿಗಳು ನಿಯಮಿತವಾಗಿ ಪರಿಶೀಲನೆ ನಡೆಸಬೇಕಿದ್ದರೂ ಅವರು ಅಪರೂಪಕ್ಕೆ ಮಾತ್ರ ಭೇಟಿ ನೀಡಿ, ಗುತ್ತಿಗೆದಾರರಿಗೆ ಶಹಬ್ಬಾಸ್ ಹೇಳಿ ಹೊರಟು ಹೋಗುತ್ತಿರುವುದರಿಂದ ಬಡವರಿಗೆ ನೆರವಾಗಬೇಕಿದ್ದ ಯೋಜನೆ ಹಣದ ಲಾಭದ ಯೋಜನೆಯಾಗಿ ಬದಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.
ಸಾರ್ವಜನಿಕರ ಬೇಡಿಕೆಯಂತೆ ಸರ್ಕಾರ ಹಾಗೂ ಸ್ಥಳೀಯ ಆಡಳಿತ ಇಂದಿರಾ ಕ್ಯಾಂಟೀನ್‌ಗಳ ಸೇವೆಯನ್ನು ಪುನಃ ಶ್ರದ್ಧೆಯಿಂದ ಪರಿಶೀಲಿಸಿ, ಬಡವರ ಆಶಯಕ್ಕೆ ತಕ್ಕಂತೆ ಗುಣಮಟ್ಟದ ಆಹಾರ ನೀಡುವಂತಹ ಕ್ರಮ ಕೈಗೊಳ್ಳಬೇಕಾಗಿದೆ. ವರದಿ ಅವಿನಾಶ್