ಪುನರ್ಜನ್ಮ ಎಂಬುದು ಇಂದಿಗೂ ವಿಜ್ಞಾನಕ್ಕೆ ಸವಾಲಾಗಿರುವ ಒಂದು ಗೂಢ ವಿಷಯ. ಕೆಲವೊಮ್ಮೆ ಸಣ್ಣ ಮಕ್ಕಳು ತಮ್ಮ ಹಿಂದಿನ ಜನ್ಮದ ಬಗ್ಗೆ ಹೇಳುವ ವಿಚಾರಗಳು ಜನರಲ್ಲಿ ಅಚ್ಚರಿ ಮೂಡಿಸುತ್ತವೆ. ಇದೀಗ ರಾಜಸ್ಥಾನದ ಟೋಂಕ್ ಜಿಲ್ಲೆಯಲ್ಲಿ ನಡೆದ ಒಂದು ಘಟನೆ ಇದೇ ರೀತಿಯ ಕುತೂಹಲವನ್ನು ಹುಟ್ಟುಹಾಕಿದೆ.

ಟೋಂಕ್ ಜಿಲ್ಲೆಯ ಜೈಕಮಾಬಾದ್ ಗ್ರಾಮದ 10 ವರ್ಷದ ಕನ್ಹಾರಾಮ್ ಬೈರ್ವಾ ಎಂಬ ಬಾಲಕ, ತಾನು ಸುಮಾರು 400 ವರ್ಷಗಳ ಹಿಂದೆ ಆಳ್ವಿಕೆ ನಡೆಸಿದ ಆಮೀರ್‌ನ ಪ್ರಸಿದ್ಧ ರಾಜ ಮಾನ್ ಸಿಂಗ್ ಎಂದು ಹೇಳಿಕೊಳ್ಳುತ್ತಿದ್ದು, ಈ ಹೇಳಿಕೆ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಕಳೆದ ಮೂರು ವರ್ಷಗಳಿಂದ ಕನ್ಹಾರಾಮ್ ತನ್ನ ಕುಟುಂಬದವರಿಗೆ “ನನ್ನನ್ನು ಆಮೀರ್ ಕೋಟೆಗೆ ಕರೆದುಕೊಂಡು ಹೋಗಿ, ನಾನು ಅಲ್ಲಿನ ರಾಜ” ಎಂದು ಒತ್ತಾಯಿಸುತ್ತಿದ್ದಾನೆ. ಆರಂಭದಲ್ಲಿ ಇದನ್ನು ಕುಟುಂಬದವರು ಮಗುವಿನ ಕಲ್ಪನೆ ಎಂದು ನಿರ್ಲಕ್ಷಿಸಿದ್ದರು. ಆದರೆ ಕಾಲಕ್ರಮೇಣ ಆತ ಹೇಳುತ್ತಿರುವ ಐತಿಹಾಸಿಕ ಘಟನೆಗಳು, ಯುದ್ಧಗಳ ವಿವರಗಳು ಹಾಗೂ ಆತನ ವರ್ತನೆಯಲ್ಲಿ ಕಾಣುತ್ತಿರುವ ಬದಲಾವಣೆಗಳು ಎಲ್ಲರ ಗಮನ ಸೆಳೆದಿವೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಬಾಲಕ, “ನನ್ನ ಹೆಸರು ರಾಜ ಮಾನ್ ಸಿಂಗ್. ನನಗೆ ಇಬ್ಬರು ರಾಣಿಯರು ಮತ್ತು ಮೂವರು ಸಹೋದರರಿದ್ದರು. ಜೈಪುರದ ಸವಾಯಿ ಮಾನ್ ಸಿಂಗ್ ಆಸ್ಪತ್ರೆ ನನ್ನ ಹೆಸರಿನಲ್ಲಿದೆ” ಎಂದು ಹೇಳಿದ್ದಾನೆ. ಇತಿಹಾಸದ ಪ್ರಕಾರ ರಾಜ ಮಾನ್ ಸಿಂಗ್ ಮೊಘಲ್ ಚಕ್ರವರ್ತಿ ಅಕ್ಬರ್‌ನ ಪ್ರಮುಖ ಸೇನಾಪತಿಯಾಗಿದ್ದು, 16ನೇ ಶತಮಾನದಲ್ಲಿ ಆಳ್ವಿಕೆ ನಡೆಸಿದ್ದರು. ಹಳದಿಘಾಟಿ ಯುದ್ಧದಲ್ಲಿ ಮಹಾರಾಣಾ ಪ್ರತಾಪ್ ವಿರುದ್ಧ ಹೋರಾಡಿದ್ದೆ ಎಂಬುದನ್ನೂ ಬಾಲಕ ಹೇಳುತ್ತಿರುವುದು ಆಶ್ಚರ್ಯ ಮೂಡಿಸಿದೆ.

ಇದಲ್ಲದೆ, ಆಮೀರ್ ಕೋಟೆಯ ಶೀಲಾ ದೇವಿ ದೇವಸ್ಥಾನದ ಬಗ್ಗೆ ಕೂಡ ಬಾಲಕ ನೀಡುತ್ತಿರುವ ಮಾಹಿತಿ ಹೆಚ್ಚು ಗಮನ ಸೆಳೆದಿದೆ. “ನಾನೇ ಬಂಗಾಳದಿಂದ ಶೀಲಾ ದೇವಿಯ ಮೂರ್ತಿಯನ್ನು ತರಿಸಿ ಆಮೀರ್‌ನಲ್ಲಿ ಪ್ರತಿಷ್ಠಾಪಿಸಿದ್ದೆ. ಅಲ್ಲಿ ರಹಸ್ಯ ಕೋಣೆಯಲ್ಲಿ ಅಸಲಿ ಮೂರ್ತಿ ಇಂದಿಗೂ ಇದೆ” ಎಂದು ಆತ ಹೇಳುತ್ತಾನೆ. ಇತಿಹಾಸದಲ್ಲಿಯೂ ರಾಜ ಮಾನ್ ಸಿಂಗ್ ಶೀಲಾ ದೇವಿಯ ಮೂರ್ತಿಯನ್ನು ಬಂಗಾಳದಿಂದ ತಂದಿದ್ದಾರೆ ಎಂಬ ಉಲ್ಲೇಖವಿದೆ.

ಕುಟುಂಬದವರ ಪ್ರಕಾರ, ಕನ್ಹಾರಾಮ್ ಈಗ ಸಾಮಾನ್ಯ ಮಗುವಿನಂತೆ ವರ್ತಿಸುತ್ತಿಲ್ಲ. ಆಹಾರದಲ್ಲಿ ಹೆಚ್ಚಿನ ತುಪ್ಪ ಬೇಕೆಂದು ಒತ್ತಾಯಿಸುವುದು, “ನಾನು ರಾಜ” ಎಂದು ಹೇಳುವುದು ಹಾಗೂ ಮನೆಯವರೊಂದಿಗೆ ಸಾಮಾನ್ಯವಾಗಿ ಬೆರೆಯದಿರುವುದು ಗಮನಾರ್ಹವಾಗಿದೆ. ಆತನ ಮಾತು ಹಾಗೂ ನಡೆ-ನುಡಿಯಲ್ಲಿ ರಾಜವಂಶದ ಛಾಯೆ ಕಾಣಿಸುತ್ತಿದೆ ಎಂದು ಕುಟುಂಬದವರು ಹೇಳಿದ್ದಾರೆ.

ಈ ಘಟನೆ ಪುನರ್ಜನ್ಮದ ನಿಜಾಸ್ತಿ ಅಥವಾ ಮಾನಸಿಕ ಭ್ರಮೆಯೇ ಎಂಬ ಪ್ರಶ್ನೆಯನ್ನು ಮತ್ತೆ ಮುಂದಿಟ್ಟಿದ್ದು, ಜನರಲ್ಲಿ ಹಾಗೂ ಇತಿಹಾಸಕಾರರಲ್ಲಿ ಕುತೂಹಲ ಕೆರಳಿಸಿದೆ.

error: Content is protected !!