ಬೆಂಗಳೂರು ಗ್ರಾಮಾಂತರದ ಹೊಸಕೋಟೆ ತಾಲೂಕಿನ ದಬ್ಬಗುಂಟನಹಳ್ಳಿಯಲ್ಲಿ ಅನೈತಿಕ ಸಂಬಂಧದ ಹಿನ್ನೆಲೆ ನಡೆದ ಭೀಕರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಪ್ರಿಯತಮೆಯ ಗಂಡ ಅಡ್ಡಿಯಾಗುತ್ತಿದ್ದಾನೆ ಎಂಬ ಕಾರಣಕ್ಕೆ ಪ್ರಿಯಕರನೇ ಆತನನ್ನು ಹೊಂಚು ಹಾಕಿ ಹತ್ಯೆ ಮಾಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.

ಮೃತ ವ್ಯಕ್ತಿಯನ್ನು ಶಿವಶಂಕರ್ ಎಂದು ಗುರುತಿಸಲಾಗಿದೆ. ಅವರು ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದು, ತಾಯಿ, ಪತ್ನಿ ಪವಿತ್ರಾ ಹಾಗೂ ಮಕ್ಕಳೊಂದಿಗೆ ಶಾಂತಿಯುತ ಜೀವನ ನಡೆಸುತ್ತಿದ್ದರು. ಏಪ್ರಿಲ್ 13ರ ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದಿದ್ದ ಶಿವಶಂಕರ್, ಗಾಳಿ ಸೇವಿಸಲು ಮತ್ತು ಫೋನ್‌ನಲ್ಲಿ ಮಾತನಾಡಲು ಮನೆಯಿಂದ ಹೊರಬಂದಿದ್ದರು. ಇದೇ ವೇಳೆ ಕತ್ತಲಲ್ಲಿ ಕಾಯುತ್ತಿದ್ದ ಆರೋಪಿ ಅನಿಲ್ ಕುಮಾರ್ ಮಚ್ಚಿನಿಂದ ದಾಳಿ ನಡೆಸಿ ಅವರನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾನೆ.

ಮುಂದಿನ ಬೆಳಿಗ್ಗೆ ಶೌಚಾಲಯಕ್ಕೆ ತೆರಳಿದ ಶಿವಶಂಕರ್ ಅವರ ತಾಯಿ ಗೌರಮ್ಮ, ಮಗನ ಶವವನ್ನು ರಕ್ತದ ಮಡುವಿನಲ್ಲಿ ಕಂಡು ಬೆಚ್ಚಿಬಿದ್ದಿದ್ದಾರೆ. ಆರಂಭದಲ್ಲಿ ಯಾರೊಂದಿಗೂ ವೈಮನಸ್ಸಿಲ್ಲದ ಶಿವಶಂಕರ್ ಹತ್ಯೆಯ ಕಾರಣ ಪೊಲೀಸರಿಗೆ ಅಸ್ಪಷ್ಟವಾಗಿತ್ತು.

ಆದರೆ ತನಿಖೆ ಮುಂದುವರಿಸಿದಾಗ ಶಿವಶಂಕರ್ ಅವರ ಪತ್ನಿ ಪವಿತ್ರಾ ಮತ್ತು ಆರೋಪಿ ಅನಿಲ್ ಕುಮಾರ್ ನಡುವೆ ಕಳೆದ ನಾಲ್ಕು ವರ್ಷಗಳಿಂದ ಸ್ನೇಹ ಸಂಬಂಧ ಇರುವುದು ತಿಳಿದುಬಂದಿದೆ. ಇತ್ತೀಚೆಗೆ ಕುಟುಂಬದ ಸಲಹೆಯಂತೆ ಪವಿತ್ರಾ ಈ ಸಂಬಂಧವನ್ನು ಕಡಿದುಕೊಳ್ಳಲು ನಿರ್ಧರಿಸಿದ್ದರು. “ನಿನ್ನ ಜೀವನವನ್ನು ನೀನೇ ಕಟ್ಟಿಕೊಳ್ಳು” ಎಂದು ಅನಿಲ್‌ಗೆ ತಿಳಿಸಿದ್ದರೆಂದು ಹೇಳಲಾಗಿದೆ.

ಈ ಹಿನ್ನೆಲೆಯಲ್ಲಿ ಪವಿತ್ರಾಳನ್ನು ತನ್ನವಳನ್ನಾಗಿಸಿಕೊಳ್ಳಬೇಕೆಂಬ ಹಠಕ್ಕೆ ಬಿದ್ದ ಅನಿಲ್, ಶಿವಶಂಕರ್ ಅಡ್ಡಿಯಾಗುತ್ತಿದ್ದಾನೆ ಎಂದು ಭಾವಿಸಿ ಕೊಲೆ ಸಂಚು ರೂಪಿಸಿದ್ದಾನೆ. ರಾತ್ರಿ ಸಮಯದಲ್ಲಿ ಹೊಂಚು ಹಾಕಿ ಕತ್ತಿಯಿಂದ ದಾಳಿ ನಡೆಸಿ ಹತ್ಯೆ ಮಾಡಿದ್ದಾನೆ.

ಕೊಲೆ ಬಳಿಕ ಸಹಜವಾಗಿ ವರ್ತಿಸುತ್ತಿದ್ದ ಅನಿಲ್ ಕುಮಾರ್ ಅನ್ನು ಹೊಸಕೋಟೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಪ್ರಕರಣದ ತನಿಖೆಯಲ್ಲಿ ಪವಿತ್ರಾಳ ಪಾತ್ರವಿಲ್ಲವೆಂಬುದು ಕಾಲ್‌ ದಾಖಲೆಗಳು ಹಾಗೂ ಸಂದೇಶಗಳ ಪರಿಶೀಲನೆಯಿಂದ ಸ್ಪಷ್ಟವಾಗಿದೆ.

ಪ್ರಸ್ತುತ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದು, ತನಿಖೆ ಮುಂದುವರಿಯುತ್ತಿದೆ.

Related News

error: Content is protected !!