ನಾಸಿಕ್ನ ಟಿಸಿಎಸ್ ಸಂಬಂಧಿತ ಮತಾಂತರ ಮತ್ತು ಕಿರುಕುಳ ಪ್ರಕರಣದ ತನಿಖೆಯಲ್ಲಿ ಹೊಸದಾಗಿ ಸ್ಫೋಟಕ ಮಾಹಿತಿಗಳು ಬಹಿರಂಗವಾಗುತ್ತಿವೆ. ಬಿಪಿಒ ಘಟಕದಲ್ಲಿ ಎಚ್ಆರ್ ಮ್ಯಾನೇಜರ್ ಹಾಗೂ ಆಪರೇಷನ್ ಹೆಡ್ ಆಗಿದ್ದ ನಿದಾ ಖಾನ್ ಎಂಬವರು ಸಂತ್ರಸ್ತೆಯರು ದೂರು ನೀಡದಂತೆ ತಡೆದು ಆರೋಪಿಗಳ ಪರವಾಗಿ ನಿಂತಿದ್ದರೆಂಬ ಆರೋಪ ಬೆಳಕಿಗೆ ಬಂದಿದೆ.
ಈ ಬಗ್ಗೆ ನಾಸಿಕ್ ಪೊಲೀಸ್ ಆಯುಕ್ತ ಸಂದೀಪ್ ಕಾರ್ಣಿಕ್ ಮಾಹಿತಿ ನೀಡಿದ್ದು, ನಿದಾ ಖಾನ್ ಸಂತ್ರಸ್ತೆಯರನ್ನು ದೂರು ಮುಂದುವರಿಸದಂತೆ ಅಡ್ಡಿಪಡಿಸಿದ್ದಾಳೆ ಎಂದು ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಪ್ರಕರಣ ಬಹಿರಂಗವಾದ ನಂತರ ನಿದಾ ಖಾನ್ ತಲೆಮರೆಸಿಕೊಂಡಿರುವುದಾಗಿ ತಿಳಿದುಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಒಂಬತ್ತು ಪ್ರಕರಣಗಳು ದಾಖಲಾಗಿದ್ದು, ತನಿಖೆ ಮುಂದುವರಿಯುತ್ತಿದೆ. ಇದುವರೆಗೆ ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಡ್ಯಾನಿಶ್ ಶೇಖ್, ತೌಸಿಫ್ ಅತ್ತಾರ್, ರಾಜಾ ಮೆಮನ್, ಶಾರುಖ್ ಖುರೇಷಿ, ಶಫಿ ಶೇಖ್, ಆಸಿಫ್ ಅಫ್ತಾಬ್ ಅನ್ಸಾರ್ ಹಾಗೂ ಶಾರುಖ್ ಶೇಖ್ ಸೇರಿದ್ದಾರೆ. ಮತ್ತೊಬ್ಬ ಮಹಿಳಾ ಆರೋಪಿಯನ್ನು ಏಪ್ರಿಲ್ 28ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದೇ ವೇಳೆ, ಉಗ್ರ ಸಂಘಟನೆಗಳು ಅಥವಾ ವಿದೇಶಿ ಸಂಪರ್ಕಗಳ ಸಾಧ್ಯತೆಗಳ ಬಗ್ಗೆ ಊಹಾಪೋಹಗಳು ಕೇಳಿಬರುತ್ತಿರುವುದರಿಂದ, ಎಸ್ಐಡಿ, ಎಟಿಎಸ್ ಹಾಗೂ ಎನ್ಐಎ ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳೊಂದಿಗೆ ಮಾಹಿತಿ ಹಂಚಿಕೆ ಮಾಡಲಾಗಿದೆ. ಪೂರಕ ಸಾಕ್ಷ್ಯಗಳು ಸಿಕ್ಕ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಎಂಟು ಮಹಿಳಾ ಉದ್ಯೋಗಿಗಳು ತಮ್ಮ ಹಿರಿಯ ಸಹೋದ್ಯೋಗಿಗಳಿಂದ ಮತಾಂತರವಾಗುವಂತೆ ಮಾನಸಿಕ ಹಾಗೂ ಲೈಂಗಿಕ ಕಿರುಕುಳಕ್ಕೆ ಒಳಗಾದ ಬಗ್ಗೆ ದೂರು ನೀಡಿದ್ದಾರೆ. ಆದರೆ ಈ ದೂರುಗಳನ್ನು ಮಾನವ ಸಂಪನ್ಮೂಲ ವಿಭಾಗ ನಿರ್ಲಕ್ಷಿಸಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಹಿನ್ನೆಲೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ.
ಸಂತ್ರಸ್ತೆಯರ ಹೇಳಿಕೆ ಪಡೆಯಲು ಮಹಿಳಾ ಜಿಲ್ಲಾಧಿಕಾರಿ ಹಾಗೂ ಇತರ ಮಹಿಳಾ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಕೌನ್ಸೆಲಿಂಗ್ ನಂತರ ಇನ್ನಷ್ಟು ಮಹಿಳೆಯರು ಮುಂದೆ ಬಂದು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
