ಇಂಡಿ: ಪತಿಯ ಸಾವನ್ನು ಹೃದಯಾಘಾತ ಎಂದು ನಂಬಿಸಿ ಅಂತ್ಯಸಂಸ್ಕಾರ ನೆರವೇರಿಸಿದ್ದ ಪತ್ನಿಯೇ, ಪ್ರಿಯಕರನೊಂದಿಗೆ ಸೇರಿ ಸಂಚು ರೂಪಿಸಿ ಪತಿಯನ್ನು ಕೊಲೆ ಮಾಡಿದ್ದಾಳೆ ಎಂಬ ಗಂಭೀರ ಆರೋಪ ಕೇಳಿಬಂದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಸಂಚಲನ ಮೂಡಿಸಿದೆ.

ಮೇ 6ರಂದು ಅರುಣಕುಮಾರ್ ಬಡಿಗೇರ (28) ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಅವರ ಪತ್ನಿ ಭಾಗ್ಯಶ್ರೀ ಕುಟುಂಬಸ್ಥರಿಗೆ ತಿಳಿಸಿದ್ದಳು. ಆಕೆಯ ಮಾತನ್ನು ನಂಬಿದ ಕುಟುಂಬದವರು ಯಾವುದೇ ವೈದ್ಯಕೀಯ ಪರೀಕ್ಷೆ ಅಥವಾ ಮರಣೋತ್ತರ ಪರೀಕ್ಷೆ ನಡೆಸದೆ ಸಾಂಪ್ರದಾಯಿಕವಾಗಿ ಅಂತ್ಯಸಂಸ್ಕಾರ ನೆರವೇರಿಸಿದ್ದರು.

ಆದರೆ ಕಳೆದ ಕೆಲವು ವಾರಗಳಿಂದ ಭಾಗ್ಯಶ್ರೀಯ ವರ್ತನೆ ಅನುಮಾನಾಸ್ಪದವಾಗಿರುವುದನ್ನು ಗಮನಿಸಿದ ಮೃತನ ಕುಟುಂಬಸ್ಥರು ಆಕೆಯ ಮೊಬೈಲ್ ಪರಿಶೀಲಿಸಿದಾಗ ಹಲವು ಮಹತ್ವದ ಮಾಹಿತಿ ಪತ್ತೆಯಾಗಿದೆ. ಮೊಬೈಲ್‌ನಲ್ಲಿದ್ದ ಚಾಟಿಂಗ್, ಕರೆಗಳ ದಾಖಲೆಗಳು ಹಾಗೂ ವಿಡಿಯೋ ಕಾಲ್‌ಗಳ ಸ್ಕ್ರೀನ್‌ಶಾಟ್‌ಗಳು ಪ್ರಕರಣಕ್ಕೆ ಹೊಸ ತಿರುವು ನೀಡಿವೆ.

ಕುಟುಂಬಸ್ಥರ ಆರೋಪದ ಪ್ರಕಾರ, ಭಾಗ್ಯಶ್ರೀ ತನ್ನ ಕಾಲೇಜು ದಿನಗಳ ಸಹಪಾಠಿ ದೀಪಕ್ ನಾವಾದಿ ಎಂಬಾತನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಈ ಸಂಬಂಧಕ್ಕೆ ಪತಿ ಅರುಣಕುಮಾರ್ ಅಡ್ಡಿಯಾಗಿದ್ದ ಕಾರಣ, ಮೇ 5ರ ರಾತ್ರಿ ಊಟದಲ್ಲಿ ನಿದ್ದೆ ಮಾತ್ರೆ ನೀಡಿ, ಮರುದಿನ ಮುಂಜಾನೆ ಗಾಢ ನಿದ್ರೆಯಲ್ಲಿದ್ದಾಗ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ.

ಈ ಕುರಿತು ಮೊಬೈಲ್‌ನಲ್ಲಿ ದೊರೆತ ಡಿಜಿಟಲ್ ಸಾಕ್ಷ್ಯಗಳ ಆಧಾರದ ಮೇಲೆ ಮೃತನ ಕುಟುಂಬಸ್ಥರು ಜುಲೈ 19ರಂದು ಇಂಡಿ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಭಾಗ್ಯಶ್ರೀಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಸಿದ್ಧತೆ ನಡೆಸಿದ್ದಾರೆ.

ಮೃತನ ಸಹೋದರಿ ಅಶ್ವಿನಿ ಸುತಾರ ಮಾತನಾಡಿ, “ನನ್ನ ಸಹೋದರನಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಹೃದಯಾಘಾತವಾಗಿದೆ ಎಂದು ಭಾಗ್ಯಶ್ರೀ ಹೇಳಿದ್ದರಿಂದ ನಾವು ನಂಬಿದ್ದೆವು. ವೈದ್ಯಕೀಯ ಪರೀಕ್ಷೆಯನ್ನೂ ಮಾಡಿಸದೆ ಅಂತ್ಯಸಂಸ್ಕಾರ ನೆರವೇರಿಸಿದ್ದೆವು. ನಂತರ ಮೊಬೈಲ್ ಚಾಟಿಂಗ್ ಮತ್ತು ವಿಡಿಯೋ ಕರೆಗಳ ಮಾಹಿತಿ ಸಿಕ್ಕಿದ್ದು, ಆಕೆಯೇ ನನ್ನ ಸಹೋದರನನ್ನು ಕೊಲೆ ಮಾಡಿದ್ದಾಳೆ ಎಂಬ ಅನುಮಾನ ಬಲವಾಗಿದೆ. ಆರೋಪಿಯನ್ನು ಕೂಡಲೇ ಬಂಧಿಸಿ ನ್ಯಾಯ ಒದಗಿಸಬೇಕು,” ಎಂದು ಆಗ್ರಹಿಸಿದ್ದಾರೆ.

ಇಂಡಿ ಉಪವಿಭಾಗದ ಡಿವೈಎಸ್‌ಪಿ ಸದಾಶಿವ ಕಟ್ಟಿಮನಿ ಪ್ರತಿಕ್ರಿಯಿಸಿ, “ಪ್ರಕರಣ ದಾಖಲಾಗಿದ್ದು, ದಾಖಲೆಗಳು ಹಾಗೂ ಲಭ್ಯವಿರುವ ಸಾಕ್ಷ್ಯಗಳ ಆಧಾರದ ಮೇಲೆ ಸಮಗ್ರ ತನಿಖೆ ನಡೆಸಲಾಗುತ್ತದೆ. ಆರೋಪಿಯನ್ನು ಶೀಘ್ರವೇ ವಿಚಾರಣೆಗೆ ಒಳಪಡಿಸಿ ಸತ್ಯಾಸತ್ಯತೆ ಹೊರತರಲಾಗುವುದು,” ಎಂದು ತಿಳಿಸಿದ್ದಾರೆ.

ಸೂಚನೆ: ಈ ಪ್ರಕರಣದಲ್ಲಿ ಕೇಳಿಬಂದಿರುವ ಆರೋಪಗಳು ಕುಟುಂಬಸ್ಥರು ನೀಡಿರುವ ದೂರಿನ ಆಧಾರದಲ್ಲಿದ್ದು, ತನಿಖೆ ಪೂರ್ಣಗೊಂಡ ಬಳಿಕವೇ ಘಟನೆಯ ನಿಖರ ಸತ್ಯಾಸತ್ಯತೆ ಸ್ಪಷ್ಟವಾಗಲಿದೆ.

Related News

error: Content is protected !!