ಬೆಂಗಳೂರು: ಪತಿಯ ನಿರಂತರ ಅನುಮಾನ ಮತ್ತು ಕಿರುಕುಳದಿಂದ ಬೇಸತ್ತ ಯುವ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಆರೋಪದ ಘಟನೆ ಬೆಂಗಳೂರಿನ ಇಂದಿರಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಿ.ಎಸ್‌ಸಿ ಪದವಿ ಪೂರ್ಣಗೊಳಿಸಿದ್ದ 21 ವರ್ಷದ ಪ್ರೇರಣಾ ಮೃತಪಟ್ಟಿದ್ದು, ಈ ಪ್ರಕರಣ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ದುಪ್ಪನಹಳ್ಳಿ ಸಮೀಪದ ಪತಿಯ ಮನೆಯಲ್ಲಿ ವಾಸವಾಗಿದ್ದ ಪ್ರೇರಣಾ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾತ್‌ರೂಮ್‌ನಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವಿಷಯ ತಿಳಿದ ಕುಟುಂಬಸ್ಥರು ಅವರನ್ನು ತಕ್ಷಣ ಇಂದಿರಾನಗರದ ಚಿನ್ಮಯಿ ಆಸ್ಪತ್ರೆಗೆ ಕರೆದೊಯ್ದರೂ, ಆಸ್ಪತ್ರೆಗೆ ತಲುಪುವಷ್ಟರಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಪ್ರೇರಣಾ ಮತ್ತು ವಿನಯ್ ಕುಮಾರ್ ಅವರ ವಿವಾಹ ಸುಮಾರು ಒಂದೂವರೆ ವರ್ಷದ ಹಿಂದೆ ನಡೆದಿತ್ತು. ಮದುವೆಯ ನಂತರವೂ ಆಕೆಯ ವಿದ್ಯಾಭ್ಯಾಸ ಮುಂದುವರಿಯಲು ಅವಕಾಶ ನೀಡಲಾಗಿದ್ದು, ಈ ವರ್ಷವಷ್ಟೇ ಅವರು ಬಿ.ಎಸ್‌ಸಿ ಪದವಿ ಪೂರ್ಣಗೊಳಿಸಿದ್ದರು. ಆದರೆ, ಪ್ರೇರಣಾ ಕುಟುಂಬದ ಆರೋಪದ ಪ್ರಕಾರ, ವಿನಯ್ ಕುಮಾರ್ ಪತ್ನಿಯ ಬಗ್ಗೆ ಅತಿಯಾದ ಅನುಮಾನ ಹೊಂದಿದ್ದು, ಇದೇ ವಿಚಾರವಾಗಿ ಆಗಾಗ ಜಗಳ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಜೊತೆಗೆ ಮಗು ಮಾಡಿಕೊಳ್ಳುವ ವಿಚಾರದಲ್ಲೂ ಒತ್ತಡ ಹೇರಲಾಗುತ್ತಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸುಮಾರು ಎರಡು ತಿಂಗಳ ಹಿಂದೆ ಕಿರುಕುಳ ತಾಳಲಾರದೆ ಪ್ರೇರಣಾ ತಂದೆಯ ಮನೆಗೆ ತೆರಳಿದ್ದರು. ಬಳಿಕ ಎರಡೂ ಕುಟುಂಬಗಳ ನಡುವೆ ಪಂಚಾಯಿತಿ ನಡೆಸಿ ರಾಜಿ ಮಾಡಿಸಿ, 15 ದಿನಗಳ ಹಿಂದಷ್ಟೇ ಪತಿಯ ಮನೆಗೆ ಕಳುಹಿಸಲಾಗಿತ್ತು. ಆದರೆ, ಗಂಡನ ಮನೆಯವರ ವರ್ತನೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಮೃತೆಯ ಪೋಷಕರು ಆರೋಪಿಸಿದ್ದಾರೆ.

ಪ್ರೇರಣಾ ಆತ್ಮಹತ್ಯೆ ಮಾಡಿಕೊಂಡಿಲ್ಲ, ಪತಿ ಹಾಗೂ ಆತನ ಕುಟುಂಬದ ಕಿರುಕುಳವೇ ಆಕೆಯ ಸಾವಿಗೆ ಕಾರಣವಾಗಿದೆ ಎಂದು ಪೋಷಕರು ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಈ ಪ್ರಕರಣದ ನಿಖರ ಕಾರಣ ತನಿಖೆ ಪೂರ್ಣಗೊಂಡ ಬಳಿಕವೇ ಸ್ಪಷ್ಟವಾಗಬೇಕಿದೆ.

Related News

error: Content is protected !!