ಜಾಗತಿಕ ಬ್ಯಾಂಕಿಂಗ್ ಕ್ಷೇತ್ರದ ಪ್ರಮುಖ ಸಂಸ್ಥೆಯಾದ JPMorgan Chase ನಲ್ಲಿ ಗಂಭೀರ ವಿವಾದವೊಂದು ಸ್ಫೋಟಗೊಂಡಿದೆ. ಸಂಸ್ಥೆಯ ಲಿವರೇಜ್ಡ್ ಫೈನಾನ್ಸ್ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕಿ ಲೋರ್ನಾ ಹೆಜ್ಡ್ಜಿನಿ ವಿರುದ್ಧ ಭಾರತೀಯ ಮೂಲದ ಕಿರಿಯ ಉದ್ಯೋಗಿಯೊಬ್ಬರು ಲೈಂಗಿಕ ಕಿರುಕುಳ, ಜನಾಂಗೀಯ ಅವಹೇಳನ ಹಾಗೂ ವೃತ್ತಿಪರ ಬೆದರಿಕೆ ಆರೋಪಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

‘ಜಾನ್ ಡೋ’ ಎಂಬ ಹೆಸರಿನಲ್ಲಿ ಗುರುತಿಸಿಕೊಂಡಿರುವ ಸಂತ್ರಸ್ತರು, ಲೋರ್ನಾ ಅವರು ಲೈಂಗಿಕ ಸಂಬಂಧಕ್ಕೆ ಒತ್ತಾಯಿಸಿ, ನಿರಾಕರಿಸಿದರೆ ವೃತ್ತಿ ಜೀವನ ಹಾಳುಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. “ನಿನ್ನ ಬಡ್ತಿ ತಡೆಹಿಡಿಯುತ್ತೇನೆ, ಮ್ಯಾನೇಜ್‌ಮೆಂಟ್ ಭಾರತೀಯರನ್ನು ಉನ್ನತ ಹುದ್ದೆಗಳಿಗೆ ಒಪ್ಪುವುದಿಲ್ಲ” ಎಂದು ಹೇಳಿ ಒತ್ತಡ ಹೇರಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.

ಈ ಸಂಬಂಧ New York County Supreme Court ನಲ್ಲಿ ಏಪ್ರಿಲ್ 27ರಂದು ಮೊಕದ್ದಮೆ ದಾಖಲಾಗಿದ್ದು, ಲೈಂಗಿಕ ದೌರ್ಜನ್ಯ ಮಾತ್ರವಲ್ಲದೆ ಜನಾಂಗೀಯ ಕಿರುಕುಳ ಮತ್ತು ವೃತ್ತಿಪರ ಬಲವಂತದ ಆರೋಪಗಳೂ ಸೇರಿವೆ.

ಮೊಕದ್ದಮೆಯ ವಿವರಗಳ ಪ್ರಕಾರ, 2024ರಲ್ಲಿ ಇಬ್ಬರೂ ಒಂದೇ ವಿಭಾಗದಲ್ಲಿ ಕೆಲಸ ಆರಂಭಿಸಿದ ಬಳಿಕ ಕಿರುಕುಳಗಳು ಆರಂಭಗೊಂಡವು. ಅನೇಕ ಸಂದರ್ಭಗಳಲ್ಲಿ ಅಸಭ್ಯ ವರ್ತನೆ, ಅನಾವಶ್ಯಕ ಸ್ಪರ್ಶ ಮತ್ತು ಅವಮಾನಕಾರಿ ಮಾತುಗಳನ್ನು ಬಳಕೆ ಮಾಡಲಾಗಿದೆ ಎಂದು ಸಂತ್ರಸ್ತರು ತಿಳಿಸಿದ್ದಾರೆ.

ಇದರ ಜೊತೆಗೆ, ಖಾಸಗಿ ಭೇಟಿಗಳು ಹಾಗೂ ಪಾನೀಯಗಳಿಗೆ ಒತ್ತಾಯಿಸಿ, ನಿರಾಕರಿಸಿದಾಗ “ನನ್ನ ಮಾತಿಗೆ ಒಪ್ಪದಿದ್ದರೆ ನಿನ್ನ ವೃತ್ತಿ ಜೀವನ ನಾಶ ಮಾಡುತ್ತೇನೆ” ಎಂದು ಬೆದರಿಕೆ ಹಾಕಲಾಗುತ್ತಿತ್ತಂತೆ. ಸೆಪ್ಟೆಂಬರ್ 2024ರವರೆಗೂ ಈ ಒತ್ತಡ ಮುಂದುವರಿದಿದ್ದು, ಕಚೇರಿಯಲ್ಲಿಯೇ ಅವಮಾನಕಾರಿ ವರ್ತನೆ ತೋರಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

ಇನ್ನೂ ಗಂಭೀರವಾಗಿ, ಒಂದು ಸಂದರ್ಭದಲ್ಲಿ ಆರೋಪಿತ ಅಧಿಕಾರಿ ಸಂತ್ರಸ್ತನ ನಿವಾಸಕ್ಕೂ ತೆರಳಿ ಅಸಭ್ಯವಾಗಿ ವರ್ತಿಸಿ, ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದರೆಂದು ಹಾಗೂ ಸಂತ್ರಸ್ತನ ಪತ್ನಿಯನ್ನು ಜನಾಂಗೀಯವಾಗಿ ಅವಹೇಳನ ಮಾಡಿದ್ದಾಗಿ ದೂರಿನಲ್ಲಿ ಹೇಳಲಾಗಿದೆ.

ಮೇ 2025ರಲ್ಲಿ ಸಂತ್ರಸ್ತರು ಸಂಸ್ಥೆಗೆ ಲಿಖಿತ ದೂರು ಸಲ್ಲಿಸಿದ್ದರೂ, JPMorgan Chase ನಡೆಸಿದ ಆಂತರಿಕ ತನಿಖೆಯಲ್ಲಿ ಆರೋಪಗಳನ್ನು ಸಮರ್ಥಿಸುವ ಪುರಾವೆಗಳು ದೊರಕಲಿಲ್ಲವೆಂದು ಹೇಳಿ ದೂರು ತಳ್ಳಿ ಹಾಕಲಾಗಿದೆ.

ಸಂಸ್ಥೆಯ ವಕ್ತಾರರ ಪ್ರಕಾರ, “ವಿಸ್ತೃತ ತನಿಖೆಯ ಬಳಿಕ ಯಾವುದೇ ಸತ್ಯಾಂಶ ಪತ್ತೆಯಾಗಿಲ್ಲ. ಅನೇಕ ಉದ್ಯೋಗಿಗಳು ಸಹಕರಿಸಿದ್ದರೂ, ದೂರುದಾರರು ತನಿಖೆಯಲ್ಲಿ ಸಂಪೂರ್ಣವಾಗಿ ಭಾಗವಹಿಸಲಿಲ್ಲ” ಎಂದು ಸ್ಪಷ್ಟಪಡಿಸಲಾಗಿದೆ.

ಈ ಘಟನೆ ಕಾರ್ಪೋರೇಟ್ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಪ್ರಕರಣದ ಮುಂದಿನ ಹಂತಗಳತ್ತ ಎಲ್ಲರ ಗಮನ ಸೆಳೆಯುತ್ತಿದೆ.

Related News

error: Content is protected !!