ನಗರಗೆರೆ ಹೋಬಳಿಯ ವಾಟದಹೊಸಹಳ್ಳಿಯಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಗ್ರಾಮದ ನಿವಾಸಿ ರಾಮಚಂದ್ರಪ್ಪ (57) ಅವರು ಕಳೆದ ಮೂರು ದಿನಗಳಿಂದ ಕಾಣೆಯಾಗಿದ್ದರೆಂದು ತಿಳಿದುಬಂದಿದ್ದು, ಶುಕ್ರವಾರ ಗ್ರಾಮದ ಕೆರೆಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಕುಟುಂಬಸ್ಥರು ಮತ್ತು ಗ್ರಾಮಸ್ಥರ ಮಾಹಿತಿ ಪ್ರಕಾರ, ರಾಮಚಂದ್ರಪ್ಪ ಅವರು ಬುಧವಾರದಿಂದಲೇ ಕಾಣೆಯಾಗಿದ್ದರು. ಇಂದು ಬೆಳಿಗ್ಗೆ ಕೆರೆಯಲ್ಲಿ ಶವ ತೇಲುತ್ತಿರುವುದು ಕಂಡುಬಂದಿದ್ದು, ಈ ಘಟನೆ ಗ್ರಾಮದಲ್ಲಿ ಶೋಕ ವಾತಾವರಣ ನಿರ್ಮಿಸಿದೆ.
ರಾಮಚಂದ್ರಪ್ಪ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಹರೀಶ್ ಗ್ರಾಮಾಂತರ ಠಾಣೆಯ ಪೊಲೀಸ್ ಉಪನಿರೀಕ್ಷಕರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಕೆರೆಯ ಆಳದಿಂದ ಶವವನ್ನು ಸುರಕ್ಷಿತವಾಗಿ ಹೊರತೆಗೆದರು. ನಂತರ ಮೃತದೇಹವನ್ನು ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಯಿತು.
ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಯೋ ಅಥವಾ ಇತರ ಕಾರಣಗಳೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ.
ವರದಿ: ಅವಿನಾಶ್
