ಮಂಡ್ಯ: ಮದ್ದೂರಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ (BCM) ನಿವೃತ್ತ ಹಾಸ್ಟೆಲ್ ಸೂಪರಿಂಟೆಂಡೆಂಟ್ ಶಿವರಾಜು ಅವರ ಮನೆ ಮತ್ತು ಫಾರ್ಮ್‌ಹೌಸ್ ಮೇಲೆ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಶೋಧ ಕಾರ್ಯದ ವೇಳೆ ಹಾಸ್ಟೆಲ್ ಮಕ್ಕಳಿಗೆ ಸೇರಬೇಕಿದ್ದ ಸರ್ಕಾರಿ ಸವಲತ್ತುಗಳು, ಬೆಲೆಬಾಳುವ ಮದ್ಯದ ಬಾಟಲಿಗಳು ಹಾಗೂ ಅಪಾರ ಪ್ರಮಾಣದ ಅಕ್ರಮ ಆಸ್ತಿ ಪತ್ತೆಯಾಗಿದ್ದು, ಅಧಿಕಾರಿಗಳನ್ನೇ ದಂಗುಬಡಿಸಿದೆ.


ಕಳೆದ ತಿಂಗಳಷ್ಟೇ ಸೇವೆಯಿಂದ ನಿವೃತ್ತರಾಗಿದ್ದ ಶಿವರಾಜು ಅವರ ಮದ್ದೂರಿನ ವಿನಾಯಕ ಬಡಾವಣೆಯ ನಿವಾಸ ಹಾಗೂ ಅವಸರಹಳ್ಳಿಯಲ್ಲಿರುವ ಫಾರ್ಮ್‌ಹೌಸ್ ಮೇಲೆ ಲೋಕಾಯುಕ್ತ ಇನ್‌ಸ್ಪೆಕ್ಟರ್ ಬ್ಯಾಟರಾಯಗೌಡ ನೇತೃತ್ವದ ತಂಡ ಏಕಕಾಲದಲ್ಲಿ ದಾಳಿ ನಡೆಸಿದೆ.

ಪರಿಶೀಲನೆ ವೇಳೆ ಇಡೀ ಮನೆಯೇ ಮಿನಿ ಬಾರ್ ಮತ್ತು ಗೋದಾಮಿನಂತಾಗಿರುವುದು ಕಂಡುಬಂದಿದೆ. ನೂರಾರು ದುಬಾರಿ ಮದ್ಯದ ಬಾಟಲಿಗಳ ಜತೆಗೆ, ಹಾಸ್ಟೆಲ್ ವಿದ್ಯಾರ್ಥಿಗಳಿಗೆ ವಿತರಿಸಬೇಕಾಗಿದ್ದ ಹೊಸ ಬಟ್ಟೆಬರೆಗಳು, ಸೀರೆಗಳು, ಕೈಗಡಿಯಾರಗಳು (Watches) ಹಾಗೂ ಚಿನ್ನ-ಬೆಳ್ಳಿ ವಸ್ತುಗಳನ್ನು ಒಮ್ಮೆಯೂ ಬಳಸದೆ ಮನೆಯಲ್ಲೇ ಅಕ್ರಮವಾಗಿ ದಾಸ್ತಾನು ಮಾಡಿಟ್ಟುಕೊಂಡಿರುವುದು ಪತ್ತೆಯಾಗಿದೆ.

ಬಡ ವಿದ್ಯಾರ್ಥಿಗಳಿಗೆ ಸಿಗಬೇಕಿದ್ದ ಸರ್ಕಾರದ ಸೌಲಭ್ಯಗಳನ್ನು ದೋಚಿ ತನ್ನ ಸ್ವಂತ ಮನೆಗೆ ಸಾಗಿಸಿರುವ ಅಕ್ರಮ ಜಾಲ ಬಯಲಾಗಿದೆ.


ಲೋಕಾಯುಕ್ತ ಅಧಿಕಾರಿಗಳು ಪತ್ತೆಯಾದ ಚಿನ್ನಾಭರಣ, ಬೆಲೆಬಾಳುವ ವಸ್ತುಗಳು ಮತ್ತು ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ಅಕ್ರಮ ಆಸ್ತಿ ಗಳಿಕೆ ಸಂಬಂಧ ಶಿವರಾಜು ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

Related News

error: Content is protected !!