ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಹೊರವಲಯದಲ್ಲಿ ಒಂದೂವರೆ ವರ್ಷದ ಕಂದಮ್ಮನ ಎದುರೇ 26 ವರ್ಷದ ಗೃಹಿಣಿ ಸ್ನೇಹಾ ಎಂಬಾಕೆಯ ಬರ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದ್ದು, ಆರೋಪಿ ಶುಭಮ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ವೇಳೆ ಮೃತಳ ಪತಿ ಅಮಿತ್‌ನನ್ನೂ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಸೆಪ್ಟೆಂಬರ್ 19ರಂದು ಸಿಂಧನೂರಿನ ಆರ್‌ಎಚ್. ಕ್ಯಾಂಪ್ 5ರ ಗ್ರಾಮದ ಹೊರವಲಯದ ಜಮೀನಿನಲ್ಲಿ ಸ್ನೇಹಾ ಅವರ ಮೃತದೇಹ ಪತ್ತೆಯಾಗಿತ್ತು. ದುಷ್ಕರ್ಮಿಗಳು ಆಕೆಯ ತಲೆಗೆ ಬಲವಾದ ವಸ್ತುವಿನಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದು, ಬಳಿಕ ಆಕೆಯ ಒಂದೂವರೆ ವರ್ಷದ ಪುಟ್ಟ ಮಗುವನ್ನು ಶವದ ಪಕ್ಕದಲ್ಲೇ ಅನಾಥವಾಗಿ ಬಿಟ್ಟು ಪರಾರಿಯಾಗಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಶ್ಯುಗಿರಿ ತಿಳಿಸಿದ್ದಾರೆ.

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಹತ್ಯೆಗೆ ಸಂಬಂಧಿಸಿದ ಹಲವು ಆಘಾತಕಾರಿ ಅಂಶಗಳು ಬಯಲಿಗೆ ಬಂದಿವೆ. ಆರೋಪಿ ಶುಭಮ್, ಮೃತ ಸ್ನೇಹಾಳ ಪತಿ ಅಮಿತ್‌ನ ಸ್ನೇಹಿತನಾಗಿದ್ದು, ಸ್ನೇಹಾ ಹಾಗೂ ಶುಭಮ್ ನಡುವೆ ಆತ್ಮೀಯ ಸಂಪರ್ಕ ಬೆಳೆದಿತ್ತು. ಈ ವಿಚಾರವಾಗಿ ದಂಪತಿ ನಡುವೆ ನಿರಂತರ ಗಲಾಟೆ ನಡೆಯುತ್ತಿದ್ದುದರಿಂದ ಸ್ನೇಹಾ ಪತಿಯನ್ನು ತೊರೆದು ಅಜ್ಜಿ ಮನೆಯಲ್ಲಿ ವಾಸವಿದ್ದರು. ಅಲ್ಲದೆ, ಬೇರೆಡೆಗೆ ಹೋಗುವಂತೆ ಆಕೆ ಶುಭಮ್‌ಗೆ ಒತ್ತಾಯಿಸುತ್ತಿದ್ದಳು ಎನ್ನಲಾಗಿದೆ.
ಘಟನೆ ನಡೆದ ದಿನ ಜಮೀನಿನಲ್ಲಿ ಸ್ನೇಹಾ ಮತ್ತು ಶುಭಮ್ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಸಿಟ್ಟಿಗೆದ್ದ ಶುಭಮ್ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಬಂಧಿತ ಆರೋಪಿ ಶುಭಮ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಕೊಲೆಯಲ್ಲಿ ಪತಿ ಅಮಿತ್ ಅಥವಾ ಬೇರೆ ವ್ಯಕ್ತಿಗಳ ಪಾತ್ರವಿದೆಯೇ ಎಂಬ ಕೋನದಲ್ಲೂ ಸಿಂಧನೂರು ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Related News

error: Content is protected !!