ಭಟ್ಕಳ: ಅಕ್ರಮ ಗಾಂಜಾ ಮಾರಾಟ ಜಾಲದ ವಿರುದ್ಧ ಭಟ್ಕಳ ಶಹರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಯುವಕನೊಬ್ಬನನ್ನು ಬಂಧಿಸಿ, ಗಾಂಜಾ ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಹೆಬಳೆ ನಿವಾಸಿ 24 ವರ್ಷದ ಅಬ್ರಾರ್ ಶೇಖ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಭಟ್ಕಳ ನಗರದ ಮುಗ್ಗುಂಕಾಲೋನಿಯ ಮೌಂಟೆನ್ ಗ್ರೌಂಡ್ ಸಮೀಪ ಈ ದಾಳಿ ನಡೆಸಲಾಗಿದೆ.
ಆರೋಪಿಯು ಯಾವುದೇ ಕಾನೂನುಬದ್ಧ ಪರವಾನಿಗೆ ಇಲ್ಲದೆ ಸಾರ್ವಜನಿಕರಿಗೆ ಮಾರಾಟ ಮಾಡುವ ಉದ್ದೇಶದಿಂದ ಗಾಂಜಾವನ್ನು ಸಂಗ್ರಹಿಸಿ ಇಟ್ಟಿದ್ದಾನೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ವೇಳೆ ಸುಮಾರು 84 ಗ್ರಾಂ ತೂಕದ, ಅಂದಾಜು ₹5,000 ಮೌಲ್ಯದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಗಾಂಜಾವನ್ನು ಸಣ್ಣ ಪ್ಯಾಕೆಟ್ಗಳಾಗಿ ಪ್ಯಾಕ್ ಮಾಡಲು ಬಳಸಲಾಗುತ್ತಿದ್ದ 12 ಖಾಲಿ ಪ್ಲಾಸ್ಟಿಕ್ ಸ್ಯಾಚೆಟ್ಗಳನ್ನೂ ಪೊಲೀಸರು ಜಪ್ತಿ ಮಾಡಿದ್ದಾರೆ.
ಇದೇ ವೇಳೆ ಗಾಂಜಾ ಸಾಗಾಟ ಹಾಗೂ ಸಂಗ್ರಹಕ್ಕಾಗಿ ಬಳಸಲಾಗುತ್ತಿದ್ದ ಅಂದಾಜು ₹5 ಲಕ್ಷ ಮೌಲ್ಯದ ಬಿಳಿ ಬಣ್ಣದ ಹೊಂಡಾ ಸಿಟಿ ಕಾರನ್ನೂ ವಶಕ್ಕೆ ಪಡೆಯಲಾಗಿದೆ.
ಈ ಸಂಬಂಧ ಭಟ್ಕಳ ಶಹರ ಪೊಲೀಸ್ ಠಾಣೆಯ ಉಪ ನಿರೀಕ್ಷಕ ನವೀನ್ ಎಸ್. ನಾಯ್ಕ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯ ವಿರುದ್ಧ ಎನ್ಡಿಪಿಎಸ್ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಪ್ರಕರಣದ ಮುಂದಿನ ತನಿಖೆಯನ್ನು ಪಿಎಸ್ಐ ಸೋಮರಾಜ ಟಿ. ರಾಠೋಡ್ ಅವರು ಮುಂದುವರಿಸಿದ್ದಾರೆ.
