ದೆಹಲಿ ಜಂತರ್ ಮಂತರ್ನಲ್ಲಿ ನೀಟ್ ಪರೀಕ್ಷೆ ಅಕ್ರಮದ ವಿರುದ್ಧ ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ ವೇಳೆ ಪೊಲೀಸರು ಲಾಠಿಚಾರ್ಜ್ ನಡೆಸಿದ ಘಟನೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ಘಟನೆಯನ್ನು ಖಂಡಿಸಿ ಉತ್ತರಾಖಂಡದ ಶೇರ್ ಸಿಂಗ್ ಎಂಬ ವ್ಯಕ್ತಿ ತಾನು ಪೊಲೀಸ್ ಕಾನ್ಸ್ಟೇಬಲ್ ಆಗಿದ್ದು, ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯವನ್ನು ವಿರೋಧಿಸಿ ಸೇವೆಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ವೇದಿಕೆಯಲ್ಲೇ ಘೋಷಣೆ ಮಾಡಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು.
ಆದರೆ ಬಳಿಕ ಈ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಉತ್ತರಾಖಂಡ ಪೊಲೀಸ್ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ, ಶೇರ್ ಸಿಂಗ್ ವಿರುದ್ಧ ಈಗಾಗಲೇ ಹಲವು ಶಿಸ್ತು ಕ್ರಮಗಳು ಜಾರಿಯಲ್ಲಿದ್ದವು. ಅನುಮತಿ ಪಡೆಯದೆ ನಿರಂತರವಾಗಿ ರಜೆ ಪಡೆದಿದ್ದ ಕಾರಣ ಅವರನ್ನು ಜುಲೈ 20ರಂದು ಅಮಾನತು ಮಾಡಲಾಗಿತ್ತು. ಇದಲ್ಲದೆ, ಗ್ಯಾಂಗ್ಸ್ಟರ್ ಜೊತೆ ಅಕ್ರಮ ಭೂ ವ್ಯವಹಾರದಲ್ಲಿ ಭಾಗಿಯಾಗಿದ್ದ ಆರೋಪದ ಹಿನ್ನೆಲೆಯಲ್ಲಿ ಅವರು ಜೈಲು ಶಿಕ್ಷೆಯನ್ನೂ ಅನುಭವಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರಾಖಂಡ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಶೇರ್ ಸಿಂಗ್ ವಿರುದ್ಧ ಸೇವೆಯಿಂದ ವಜಾಗೊಳಿಸುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ “ವಿದ್ಯಾರ್ಥಿಗಳ ಪರವಾಗಿ ಪೊಲೀಸ್ ರಾಜೀನಾಮೆ” ಎಂಬ ಹೇಳಿಕೆಯ ಹಿಂದೆ ಬೇರೆಯದೇ ವಾಸ್ತವಾಂಶವಿದೆ ಎಂಬುದು ಇದೀಗ ಬಹಿರಂಗವಾಗಿದೆ.
