ಭಟ್ಕಳ ತಾಲ್ಲೂಕಿನ ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ವೆಂಕಟಾಪುರ ಹೊಳೆ ಪ್ರದೇಶದಲ್ಲಿ ಪರಿಸರ ನಿಯಮ ಉಲ್ಲಂಘನೆ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ಸ್ಥಳೀಯ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿ ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.
ಗ್ರಾಮಸ್ಥರ ದೂರಿನ ಪ್ರಕಾರ, ಹೊಳೆ ಸಮೀಪ ನಡೆಯುತ್ತಿರುವ ರೆಸಾರ್ಟ್ ನಿರ್ಮಾಣ ಚಟುವಟಿಕೆಗಳ ವೇಳೆ ಕೆಲವು ಕಾಡುಮರಗಳನ್ನು ತೆರವುಗೊಳಿಸಲಾಗಿದ್ದು, ಕರಾವಳಿ ನಿಯಂತ್ರಣ ವಲಯ (ಸಿಆರ್ಜೆಡ್) ನಿಯಮಗಳನ್ನು ಉಲ್ಲಂಘಿಸಿ ಹೊಳೆ ಪ್ರದೇಶದಲ್ಲಿ ಕೆಂಪು ಮಣ್ಣನ್ನು ಸುರಿಯಲಾಗಿದೆ ಎಂದು ಆರೋಪಿಸಲಾಗಿದೆ.
ಈ ಕ್ರಮದಿಂದ ಜಲಚರಗಳ ನೈಸರ್ಗಿಕ ವಾಸಸ್ಥಳಕ್ಕೆ ಹಾನಿಯಾಗುವ ಸಾಧ್ಯತೆ ಇದ್ದು, ಹೊಳೆಯ ಸ್ವಾಭಾವಿಕ ನೀರಿನ ಹರಿವಿನ ಮೇಲೂ ಪರಿಣಾಮ ಬೀರಿದೆ ಎಂದು ಗ್ರಾಮಸ್ಥರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮಳೆಗಾಲದಲ್ಲಿ ನೀರಿನ ಹರಿವಿಗೆ ಅಡ್ಡಿಯಾಗುವ ಮೂಲಕ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆರೆ ಪರಿಸ್ಥಿತಿ ಉಂಟಾಗುವ ಆತಂಕವೂ ವ್ಯಕ್ತವಾಗಿದೆ.
ದೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರ ಪುತ್ರಿ ಬೀನಾ ವೈದ್ಯ ಹಾಗೂ ಅವರ ಸಹೋದರ ಈರಪ್ಪ ಸುಬ್ಬ ಮೊಗೇರ್ ಅವರ ಹೆಸರನ್ನು ಉಲ್ಲೇಖಿಸಲಾಗಿದೆ. ಹೊಳೆ ಪ್ರದೇಶದಲ್ಲಿ ಹಾಕಲಾಗಿರುವ ಮಣ್ಣನ್ನು ತಕ್ಷಣ ತೆರವುಗೊಳಿಸಿ, ಪರಿಸರ ಹಾನಿಯ ಕುರಿತು ಸಮಗ್ರ ತನಿಖೆ ನಡೆಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇತ್ತೀಚಿನ ಕೆಲವು ಪ್ರಕೃತಿ ವಿಕೋಪಗಳು ಮತ್ತು ಅನಾಹುತಗಳಿಗೆ ಹೊಳೆಯ ಸಹಜ ಹರಿವಿನಲ್ಲಿ ಉಂಟಾದ ಅಡಚಣೆ ಕಾರಣವಾಗಿರಬಹುದೆಂಬ ಅನುಮಾನವನ್ನೂ ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ಆದಾಗ್ಯೂ, ಈ ಆರೋಪಗಳಿಗೆ ಸಂಬಂಧಿಸಿದಂತೆ ದೂರಿನಲ್ಲಿ ಹೆಸರು ಉಲ್ಲೇಖಗೊಂಡಿರುವವರ ಪ್ರತಿಕ್ರಿಯೆ ಇನ್ನೂ ಲಭ್ಯವಾಗಿಲ್ಲ. ಜಿಲ್ಲಾಡಳಿತದ ತನಿಖೆಯ ನಂತರವೇ ಪ್ರಕರಣದ ನಿಖರ ಸತ್ಯಾಂಶ ಹೊರಬರುವ ಸಾಧ್ಯತೆಯಿದೆ.
