ಹೈದರಾಬಾದ್: ನಗರದಲ್ಲಿ ಮಹಿಳೆಯರ ಭದ್ರತೆ ಪ್ರಶ್ನೆಯಾಗಿ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಜನನಿಬಿಡ ಪ್ರದೇಶದಲ್ಲೇ ಜಾಗಿಂಗ್ ಮಾಡುತ್ತಿದ್ದ ಯುವತಿಗೆ ವ್ಯಕ್ತಿಯೊಬ್ಬ ಸಾರ್ವಜನಿಕವಾಗಿ ಲೈಂಗಿಕ ಕಿರುಕುಳ ನೀಡಿರುವ ಘಟನೆ ಆತಂಕ ಮೂಡಿಸಿದೆ.
ಘಟನೆ ಸೈಬರಾಬಾದ್ ವ್ಯಾಪ್ತಿಯ ಔಟರ್ ರಿಂಗ್ ರೋಡ್ (ORR) ಪಕ್ಕದಲ್ಲಿರುವ ಜನಪ್ರಿಯ ಸೈಕ್ಲಿಂಗ್ ಟ್ರ್ಯಾಕ್ನಲ್ಲಿ ನಡೆದಿದೆ. ಬೆಳಿಗ್ಗೆ ಸುಮಾರು 6:15ರ ವೇಳೆಗೆ ಯುವತಿ ಜಾಗಿಂಗ್ ಮಾಡುತ್ತಿದ್ದಾಗ, ಎದುರಾದ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿ ಹಸ್ತಮೈಥುನ ಮಾಡಲು ಮುಂದಾಗಿದ್ದಾನೆ. ಸುತ್ತಮುತ್ತ ಸೈಕ್ಲಿಸ್ಟ್ಗಳು ಮತ್ತು ಓಟಗಾರರು ಇದ್ದರೂ ಯಾವುದೇ ಭಯವಿಲ್ಲದೆ ಆತ ಈ ಕೃತ್ಯ ಎಸಗಿರುವುದು ಸಮಾಜದ ಸುರಕ್ಷತಾ ಸ್ಥಿತಿಗತಿಗಳ ಬಗ್ಗೆ ಪ್ರಶ್ನೆ ಎಬ್ಬಿಸಿದೆ.
ಘಟನೆಯ ನಂತರ ಸಂತ್ರಸ್ತ ಯುವತಿ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಆಕ್ರೋಶ ಹೊರಹಾಕಿದ್ದು, ಸಮಾಜದ ಮನೋಭಾವವನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ. “ನಾವು ಧರಿಸುವ ಜಾಗಿಂಗ್ ಡ್ರೆಸ್ ಕೂಡ ಪ್ರಚೋದನೆ ಎನ್ನುವುದಾದರೆ, ಇನ್ನೇನು ಧರಿಸಬೇಕು? ಜನಸಂದಣಿ ಇರುವ ಸ್ಥಳದಲ್ಲೇ ಇಂತಹ ಘಟನೆಗಳು ನಡೆಯುತ್ತಿದ್ದರೆ ಮಹಿಳೆಯರಿಗೆ ಸುರಕ್ಷತೆ ಎಲ್ಲಿದೆ?” ಎಂದು ಅವರು ಕಿಡಿಕಾರಿದ್ದಾರೆ.
ಯುವತಿ ತಕ್ಷಣವೇ ತನ್ನ ಮೊಬೈಲ್ನಲ್ಲಿ ಘಟನೆ ದಾಖಲಿಸಲು ಯತ್ನಿಸಿದರೂ, ಕ್ಯಾಮೆರಾ ತೆರೆಯುವಷ್ಟರಲ್ಲಿ ಆರೋಪಿಯ ಮುಖ ಸ್ಪಷ್ಟವಾಗಿ ಸೆರೆಯಾಗಿಲ್ಲ. ಆರೋಪಿಯನ್ನು ಹಿಂಬಾಲಿಸಲು ಪ್ರಯತ್ನಿಸಿದರೂ ಆತ ಸ್ಥಳದಿಂದ ಪರಾರಿಯಾಗಿದ್ದಾನೆ. “ಇನ್ನೂ ಕೆಲವೇ ಕ್ಷಣ ಮುಂಚಿತವಾಗಿ ವಿಡಿಯೋ ತೆರೆದಿದ್ದರೆ ಮುಖ ಸೆರೆಯಾಗುತ್ತಿತ್ತು” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆರೋಪಿಯನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಜೊತೆಗೆ ನಗರದಲ್ಲಿನ ಜಾಗಿಂಗ್ ಟ್ರ್ಯಾಕ್ಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸುವ ಅಗತ್ಯವಿದೆ ಎಂಬ ಕೂಗು ಮತ್ತಷ್ಟು ಜೋರಾಗಿದೆ.
