ಸೂರತ್ (ಗುಜರಾತ್): ಒಂದು ಸಣ್ಣ ಅನುಮಾನ ಹೇಗೆ ವರ್ಷಗಳ ಕಾಲ ಸುಖವಾಗಿದ್ದ ಸಂಸಾರವನ್ನೇ ನಾಶಮಾಡಬಹುದು ಎಂಬುದಕ್ಕೆ ಗುಜರಾತ್‌ನ ಸೂರತ್‌ನಲ್ಲಿ ನಡೆದ ಭೀಕರ ಘಟನೆ ಉದಾಹರಣೆಯಾಗಿದೆ. ಖ್ಯಾತ ಆಹಾರ ತಜ್ಞೆಯಾಗಿದ್ದ ಶಿಲ್ಪಾ ಸಾಲ್ಪಿ ಅವರ ಅನುಮಾನಾಸ್ಪದ ನಾಪತ್ತೆ ಪ್ರಕರಣವು ಇದೀಗ ಹತ್ಯೆ ಪ್ರಕರಣವಾಗಿ ತಿರುಗಿದ್ದು, ಪತಿಯ ಕ್ರೂರ ಕೃತ್ಯ ಬೆಳಕಿಗೆ ಬಂದಿದೆ.

ಶಿಲ್ಪಾ ಹಾಗೂ ಅವರ ಪತಿ ವಿಶಾಲ್ ಇಬ್ಬರೂ ಸಮಾಜದಲ್ಲಿ ಹೆಸರಾಂತ ದಂಪತಿಯಾಗಿದ್ದರು. ಇವರಿಗೆ ಒಬ್ಬ ಮುದ್ದಾದ ಮಗನೂ ಇದ್ದ. ಎಲ್ಲವೂ ಸುಖವಾಗಿದ್ದರೂ, ವಿಶಾಲ್‌ಗೆ ಪತ್ನಿಯ ಮೇಲೆ ಹುಟ್ಟಿದ ಅನುಮಾನ ದಿನದಿಂದ ದಿನಕ್ಕೆ ಗಂಭೀರವಾಗುತ್ತಿತ್ತು. ಇದೇ ಕಾರಣಕ್ಕೆ ದಂಪತಿಗಳ ನಡುವೆ ಆಗಾಗ ಜಗಳಗಳು ನಡೆಯುತ್ತಿದವು.

ಘಟನೆಯ ದಿನವೂ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ನಡೆದಿದ್ದು, ಆರೋಪಿಯು ಪೂರ್ವಯೋಜಿತವಾಗಿ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿದೆ. ನಂತರ ಶಿಲ್ಪಾ ನಾಪತ್ತೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡುವ ಮೂಲಕ ಪ್ರಕರಣವನ್ನು ಬೇರೆ ದಿಕ್ಕಿಗೆ ತಳ್ಳಲು ಯತ್ನಿಸಿದ್ದಾನೆ.

ತನಿಖೆ ಆರಂಭಿಸಿದ ಪೊಲೀಸರಿಗೆ ವಿಶಾಲ್‌ನ ವರ್ತನೆ ಮೇಲೆಯೇ ಮೊದಲಿನಿಂದಲೇ ಅನುಮಾನ ಹುಟ್ಟಿತ್ತು. ಬಳಿಕ ಆತ ತನ್ನ ಮಗನಿಗೆ ಬರೆದ ಪತ್ರದಲ್ಲಿ ಕೃತ್ಯದ ಸುಳಿವು ಸಿಕ್ಕಿದ್ದು, ತನಿಖೆ ಮತ್ತಷ್ಟು ಗಂಭೀರಗೊಂಡಿತು. ಪೊಲೀಸರ ತಂಡ ಆರೋಪಿಯನ್ನು ಬೆನ್ನಟ್ಟಿ ಪಾಳುಬಿದ್ದ ಮನೆಯನ್ನು ತಲುಪಿದಾಗ ಅಲ್ಲಿ ದುರ್ವಾಸನೆ ಕಾಣಿಸಿಕೊಂಡಿತು.

ಮನೆಯಲ್ಲಿ ಇದ್ದ ಮರದ ಪೆಟ್ಟಿಗೆ ಪೊಲೀಸರ ಗಮನ ಸೆಳೆದಿದ್ದು, ಅದನ್ನು ತೆರೆಯುತ್ತಿದ್ದಂತೆ ಬೆಚ್ಚಿಬೀಳಿಸುವ ದೃಶ್ಯ ಎದುರಾಯಿತು. ಪೆಟ್ಟಿಗೆಯೊಳಗೆ ಶಿಲ್ಪಾ ಅವರ ಶವವನ್ನು ಇಟ್ಟು, ಅದರ ಮೇಲೆ ಸಿಮೆಂಟ್ ಸುರಿದು ಮರೆಮಾಚಲಾಗಿತ್ತು.

ಪ್ರಸ್ತುತ ಆರೋಪಿ ವಿಶಾಲ್ ತಲೆಮರೆಸಿಕೊಂಡಿದ್ದು, ಪೊಲೀಸರು ಅವನ ಪತ್ತೆಗೆ ಬಲೆ ಬೀಸಿದ್ದಾರೆ. ಈ ಘಟನೆ ಕುಟುಂಬದಲ್ಲಿ ನಂಬಿಕೆ ಕುಸಿದಾಗ ಅದರ ಪರಿಣಾಮ ಎಷ್ಟು ಭೀಕರವಾಗಿರಬಹುದು ಎಂಬುದನ್ನು ಮತ್ತೊಮ್ಮೆ ಮನಗಾಣಿಸಿದೆ.

Related News

error: Content is protected !!