ಹೊನ್ನಾವರ: ಮನೆಯೊಂದರಲ್ಲಿ ಕಳ್ಳತನವಾಗಿದ್ದ ಬಂಗಾರದ ಆಭರಣ ಹಾಗೂ ನಗದು ಹಣ ಪ್ರಕರಣವನ್ನು ಹೊನ್ನಾವರ ಪೊಲೀಸರು ಭೇದಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಒಟ್ಟು 127.5 ಗ್ರಾಂ ತೂಕದ ₹17.08 ಲಕ್ಷ ಮೌಲ್ಯದ ಬಂಗಾರದ ಆಭರಣ ಜಪ್ತಿ ಮಾಡಲಾಗಿದೆ.
ಫಿರ್ಯಾದಿದಾರರ ಮನೆಯಲ್ಲಿ ಕಬ್ಬಿಣದ ಟ್ರಂಕ್‌ನಲ್ಲಿ ಇರಿಸಲಾಗಿದ್ದ 128 ಗ್ರಾಂ ಬಂಗಾರದ ಆಭರಣ ಹಾಗೂ ನಗದು ಹಣ ಕಳುವಾಗಿರುವ ಕುರಿತು ನೀಡಲಾದ ದೂರಿನ ಮೇರೆಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ವೇಳೆ ಧನುಶ್ ತಂದೆ ಶ್ರೀಧರ ಗೌಡ ವಿರುದ್ಧ ಸಂಶಯ ವ್ಯಕ್ತವಾಗಿತ್ತು.
ಪ್ರಕರಣದ ಪತ್ತೆಗಾಗಿ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಖಚಿತ ಮಾಹಿತಿಯ ಮೇರೆಗೆ ಧನುಶ್ ತಂದೆ ಶ್ರೀಧರ ಗೌಡ, ದೇವಸ್ಥಾನಕೇರಿ, ಹೊನ್ನಾವರ ಹಾಗೂ ಕಳ್ಳತನದ ಆಭರಣವನ್ನು ಸ್ವೀಕರಿಸಿ ವಿಲೇವಾರಿ ಮಾಡಿದ್ದ ಆರೋಪಿತ ಗೌರೀಶ ತಂದೆ ಗಣಪತಿ ಗೌಡ, ಮೆಟ್ಟಿನಗದ್ದೆ, ಗೇರುಸೊಪ್ಪಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.
ವಿಚಾರಣೆ ವೇಳೆ ಧನುಶ್ ಗೌಡನು ಕಳುವಾದ ಬಂಗಾರದ ಆಭರಣವನ್ನು ಹೊನ್ನಾವರದ ಮಣಪ್ಪುರಂ ಫೈನಾನ್ಸ್ ಹಾಗೂ ಮುತ್ತೂಟ್ ಫಿನ್‌ಕಾರ್ಪ್‌ನಲ್ಲಿ ಅಡಮಾನ ಇಟ್ಟಿರುವುದು ಹಾಗೂ ಗೌರೀಶ ಗೌಡನ ಬಳಿ ಕೆಲವು ಆಭರಣಗಳಿದ್ದು, ಕೆಲವನ್ನು ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಆರೋಪಿಗಳಿಂದ ಒಟ್ಟು ₹17,08,300 ಮೌಲ್ಯದ 127.5 ಗ್ರಾಂ ಬಂಗಾರದ ಆಭರಣ ಜಪ್ತಿ ಮಾಡಲಾಗಿದೆ.ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಭಟ್ಕಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಗಿರೀಶ ಬಿ. ಅವರ ಮಾರ್ಗದರ್ಶನದಲ್ಲಿ ನಡೆಯಿತು.
ಹೊನ್ನಾವರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸಿದ್ದರಾಮೇಶ್ವರ ಎಸ್. ಅವರ ನೇತೃತ್ವದಲ್ಲಿ ಪಿಎಸ್‌ಐ ಮಹಾಂತೇಶ ವಾಲ್ಮೀಕಿ (ತನಿಖೆ-1), ಪಿಎಸ್‌ಐ ಸಂಗೀತಾ (ತನಿಖೆ-2), ಪ್ರೊಬೇಷನರಿ ಪಿಎಸ್‌ಐ ರೇಣುಕಾ, ಹಾಗೂ ಸಿಬ್ಬಂದಿಗಳಾದ ಗಜಾನನ ನಾಯ್ಕ, ಮನೋಜ ಡಿ., ರವಿ ನಾಯ್ಕ ಮತ್ತು ಸಚಿನ್ ನಾಯ್ಕ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದರು.
ಪ್ರಕರಣವನ್ನು ಯಶಸ್ವಿಯಾಗಿ ಪತ್ತೆಹಚ್ಚಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ಇಲಾಖೆ ಅಭಿನಂದಿಸಿ ಪ್ರಶಂಸಿಸಿದೆ.
