ಸಿದ್ದಾಪುರ: ಅಮಾಯಕ ದಲಿತ ಯುವಕನನ್ನು ಸಂಶಯದ ಹಿನ್ನೆಲೆಯಲ್ಲಿ ತೀವ್ರವಾಗಿ ಥಳಿಸಿದ ಘಟನೆಗೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲಾ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿರಸಿ ವಲಯ ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಡುವ ಕಾನಸೂರು ಸೆಕ್ಷನ್ ಡಿ ಆರ್ ಎಫ್ ಓ ಕಾರ್ತಿಕ ನಾರ್ವೇಕರ್ ಹಾಗೂ ಬೀಟ್ ಗಾರ್ಡ್ ರೋಹಿತ ನಾಯ್ಕ್ ಸೇರಿದಂತೆ ಮೂವರ ಮೇಲೆ ದಲಿತ ದೌರ್ಜನ್ಯ ಅಟ್ರಾಸಿಟಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ತಿಕ ನಾರ್ವೆeಕರ ಹಾಗೂ ರೋಹಿತ ನಾಯ್ಕ್ ಹಾಗೂ ಇನ್ನೊಬ್ಬ ಸೇರಿ ಮೂವರು ತ್ಯಾಗಲಿ ಸಮೀಪ ಇತ್ತೀಚೆಗೆ ಶವವಾಗಿ ಪತ್ತೆಯಾದ ಕಡವೆ ಪ್ರಕರಣದಲ್ಲಿ,ಸಿದ್ದಾಪುರ ತಾಲೂಕಿನ ನಾಣಿಕಟ್ಟ ಗ್ರಾಮದ ಕೂಲಿಕಾರ ಯುವಕ ನಾಗರಾಜ ಬಂಗಾರ್ಯ ಚೆನ್ನಯ್ಯ ಎಂಬಾತನನ್ನು ತನಿಖೆಯ ನೆಪದಲ್ಲಿ ಆತನ ಮನೆಯಿಂದ ಕರೆದೊಯ್ದು ಕಾನಸೂರಿನ ನರ್ಸರಿಯಲ್ಲಿ ತೀವ್ರವಾಗಿ ಥಳಿಸಿದ್ದಾರೆಂದು ಆಪಾದಿಸಲಾಗಿತ್ತು. ಥಳಿತಕ್ಕೊಳಗಾದ ಯುವಕ ದಲಿತ ವರ್ಗಕ್ಕೆ ಸೇರಿದ ಹಿನ್ನಲೆಯಲ್ಲಿ ಸ್ಥಳೀಯ ಭೀಮ ಘರ್ಜನೆ ಸಂಘಟನೆ ಪ್ರತಿಭಟನೆ ನಡೆಸಿತ್ತು. ಈ ನಡುವೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದಿನಾಂಕ 13 ರಂದು ತಡರಾತ್ರಿ ಪ್ರಕರಣ ದಾಖಲಾಗಿದೆ. ಕಾರ್ತಿಕ ನಾರ್ವೆಕರ ಹಾಗೂ ರೋಹಿತ ನಾಯ್ಕ್ ಮತ್ತು ಇನ್ನೋರ್ವನ ಮೇಲೆ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇಲ್ಲಿ ದಲಿತ ಯುವಕನ ಮೇಲೆ ನಡೆದಿರುವ ದೌರ್ಜನ್ಯ ತೀವ್ರ ವಿವಾದ ಹುಟ್ಟು ಹಾಕಿದ್ದು ಥಳಿಸಿದ ಇನ್ನೋರ್ವ ಆರೋಪಿ ಯಾರು ಎಂಬುದು ಪತ್ತೆ ಆಗಬೇಕಾಗಿದೆ.
