ಬೆಂಗಳೂರು: ನೀಟ್-2026 ಪರೀಕ್ಷೆಯಲ್ಲಿ ಕರ್ನಾಟಕದ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದರೂ, ಅಂಕಗಳ ಲೆಕ್ಕಾಚಾರದಲ್ಲಿ ವ್ಯತ್ಯಾಸ ಕಂಡುಬಂದಿದೆ ಎಂದು ರಾಜ್ಯದ ಪ್ರಮುಖ ಸಾಧಕರು ಎನ್‌ಟಿಎ (NTA) ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದಲ್ಲಿ ಮೊದಲ ಸ್ಥಾನ ಪಡೆದಿರುವ ಬೆಂಗಳೂರಿನ ಜೆ.ಪಿ.ನಗರದ ಶ್ರೀ ಚೈತನ್ಯ ಟೆಕ್ನೋ ಶಾಲೆಯ ವಿದ್ಯಾರ್ಥಿನಿ ವೈಷ್ಣವಿ ದಾಸ್ 720 ಅಂಕಗಳಿಗೆ 700 ಅಂಕಗಳನ್ನು ಪಡೆದು ಅಖಿಲ ಭಾರತ ಮಟ್ಟದಲ್ಲಿ 20ನೇ ರ‍್ಯಾಂಕ್ ಗಳಿಸಿದ್ದಾರೆ. ಆದರೆ, ಎನ್‌ಟಿಎ ಪ್ರಕಟಿಸಿದ್ದ ಕೀ ಉತ್ತರದ ಪ್ರಕಾರ ತಮಗೆ 710 ಅಂಕಗಳು ಬರಬೇಕಾಗಿತ್ತು ಎಂದು ಅವರು ಹೇಳಿದ್ದಾರೆ. 10 ಅಂಕಗಳ ವ್ಯತ್ಯಾಸದಿಂದ ತಮ್ಮ ಅಖಿಲ ಭಾರತ ರ‍್ಯಾಂಕ್ ಮೇಲೂ ಪರಿಣಾಮ ಬಿದ್ದಿದೆ ಎಂದು ವೈಷ್ಣವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದೇ ರೀತಿ, ದಾವಣಗೆರೆಯ ವಿದ್ಯಾರ್ಥಿನಿ ಎಂ. ಸುಚಿತಾ 695 ಅಂಕಗಳೊಂದಿಗೆ ರಾಜ್ಯದಲ್ಲಿ ಎರಡನೇ ಹಾಗೂ ದೇಶದಲ್ಲಿ 48ನೇ ರ‍್ಯಾಂಕ್ ಪಡೆದಿದ್ದಾರೆ. ನಾಲ್ಕೂ ವಿಷಯಗಳ ಎಲ್ಲಾ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ್ದರೂ, ಕೀ ಉತ್ತರದ ಪ್ರಕಾರ ತಮಗೆ ಪೂರ್ಣ 720 ಅಂಕಗಳು ಸಿಗಬೇಕಾಗಿತ್ತು. ಆದರೆ ಅಂತಿಮ ಫಲಿತಾಂಶದಲ್ಲಿ 25 ಅಂಕಗಳು ಕಡಿಮೆಯಾಗಿರುವುದು ನಿರಾಸೆ ತಂದಿದೆ ಎಂದು ಅವರು ತಿಳಿಸಿದ್ದಾರೆ.

ಇದರ ನಡುವೆಯೂ ನೀಟ್-2026ರಲ್ಲಿ ಕರ್ನಾಟಕದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಪ್ರಮುಖ ಸಾಧಕರ ಪಟ್ಟಿಯಲ್ಲಿ ರವಿಕಿರಣ್ ಕಿಣಿ (ಎಐಆರ್-62), ಬೆಂಗಳೂರಿನ ಅಲೆನ್ ಸಂಸ್ಥೆಯ ಬಿ.ಎಸ್. ದಿಗಂತ್ (ಎಐಆರ್-64), ಜೋಹಾನ್ ಜಾಬ್ (ಎಐಆರ್-69) ಹಾಗೂ ಜೆ. ಶ್ರೇಯಾಂಕ್ (ಎಐಆರ್-94) ಸ್ಥಾನ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

Related News

error: Content is protected !!