
ಗೌರಿಬಿದನೂರು (ಜುಲೈ 6): ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ನಿಗೂಢ ಚಡ್ಡಿ ಗ್ಯಾಂಗ್ ಮತ್ತೊಂದು ಪ್ರಕರಣದಿಂದ ಮತ್ತೆ ಭಯದ ವಾತಾವರಣ ಮೂಡಿಸಿದೆ. ಜಿಲ್ಲೆಯ ರೈಲ್ವೆ ನಿಲ್ದಾಣದ ಸುತ್ತಮುತ್ತ ದರೋಡೆಗೆ ಸಂಚು ರೂಪಿಸುತ್ತಿದ್ದ ಆಂತರಿಕ ತಂಡದ ಚಟುವಟಿಕೆಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ.
ಜುಲೈ 5ರಂದು ಮುಂಜಾನೆ ಸುಮಾರು 2:25ರ ಸುಮಾರಿಗೆ ನಾಲ್ವರು ಚಡ್ದಿ ಗ್ಯಾಂಗ್ ಸದಸ್ಯರು ರೈಲ್ವೆ ನಿಲ್ದಾಣದ ಬಳಿಯಲ್ಲಿ ಸಂಚರಿಸುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿವೆ. ಆರೋಪಿಗಳು ಚಡ್ಡಿ ಧರಿಸಿ, ಮುಖಕ್ಕೆ ಬಟ್ಟೆ ಸುತ್ತಿಕೊಂಡಿದ್ದು, ಸೊಂಟದಲ್ಲಿ ಮಾರಕಾಸ್ತ್ರಗಳನ್ನು ಹೊಂದಿದ್ದರು. ಅವರು ಪರಿಸರದಲ್ಲಿ ಶಂಕಾಸ್ಪದವಾಗಿ ಓಡಾಡುತ್ತಿದ್ದು, ದರೋಡೆಗೆ ಸಿದ್ಧತೆ ನಡೆಸುತ್ತಿದ್ದಂತೆ ಕಾಣಿಸಿತು.
ಈ ವೇಳೆ ಗಸ್ತಿನಲ್ಲಿದ್ದ ಗೌರಿಬಿದನೂರು ನಗರ ಪೊಲೀಸ್ ಸಿಬ್ಬಂದಿಗೆ ಈ ಚಟುವಟಿಕೆ ಬಗ್ಗೆ ಮಾಹಿತಿ ಸಿಕ್ಕಿತು. ಕೂಡಲೇ ಸ್ಥಳಕ್ಕೆ ಧಾವಿಸಿದರೂ ಗ್ಯಾಂಗ್ ಅದಾಗಲೇ ತಪ್ಪಿಸಿಕೊಂಡಿತ್ತು. ಪೊಲೀಸರ ಪ್ರಾಥಮಿಕ ತನಿಖೆಯಿಂದ ಇದು ಪೂರ್ವನಿಯೋಜಿತ ದರೋಡೆ ಯತ್ನವಾಗಿರಬಹುದೆಂದು ಶಂಕಿಸಲಾಗಿದೆ.
ಘಟನೆ ಹಿನ್ನೆಲೆ, ಸಾರ್ವಜನಿಕರು ಎಚ್ಚರಿಕೆಯಿಂದ ವರ್ತಿಸಬೇಕೆಂದು ಪೊಲೀಸರು ಸೂಚಿಸಿದ್ದಾರೆ. ಯಾವುದೇ ಶಂಕಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ. ಸ್ಥಳೀಯ ಪ್ರದೇಶಗಳಲ್ಲಿ ಕಾವಲು ಬಿಗಿ ಮಾಡಲಾಗಿದ್ದು, ಆರೋಪಿಗಳ ಪತ್ತೆಗೆ ಮುಂದಿನ ಕ್ರಮ ಜರುಗುತ್ತಿದೆ.
ಚಡ್ಡಿ ಗ್ಯಾಂಗ್ ಪುನಃ ಸಕ್ರಿಯವಾಗುತ್ತಿರುವುದು ಅಧಿಕಾರಿಗಳಿಗೆ ತಲೆನೋವಿನ ವಿಷಯವಾಗಿದ್ದು, ಸಾರ್ವಜನಿಕ ಸಹಕಾರದ ಮೂಲಕವೇ ಈ ಗ್ಯಾಂಗ್‌ನ್ನು ತಡೆಹಿಡಿಯಲು ಸಾಧ್ಯ ಎನ್ನುವುದು ಪೊಲೀಸರು ಹೇಳಿದ್ದಾರೆ.