ಬೆಂಗಳೂರು, ಜುಲೈ 6 – ಚೀಟಿ ಹಣದ ಆಸೆಗೆ ಬಿದ್ದು ಕೋಟ್ಯಾಂತರ ರೂಪಾಯಿಗಳನ್ನು ಹೋದವರು ಶತಾರು. ಇದೀಗ, ಬೆಂಗಳೂರಿನ ಜರಗನಹಳ್ಳಿಯಲ್ಲಿ ದೊಡ್ಡ ಪ್ರಮಾಣದ ಚೀಟಿ ವಂಚನೆಯ ಪ್ರಕರಣ ವರದಿಯಾಗಿದೆ. ಸುಮಾರು 40 ಕೋಟಿ ರೂ. ವಂಚನೆ ಮಾಡಿದ ದಂಪತಿ ಈಗ ಗಂಭೀರ ಆರೋಪ ಎದುರಿಸುತ್ತಿದ್ದಾರೆ.

ಆರೋಪಿಗಳು ಸುಧಾ ಮತ್ತು ಸಿದ್ದಾಚಾರಿ ಎಂಬ ದಂಪತಿ. ಇವರು ಕಳೆದ 20 ವರ್ಷಗಳಿಂದ ಜರಗನಹಳ್ಳಿಯಲ್ಲಿ ಚೀಟಿ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಇದರಲ್ಲಿ ಸುಮಾರು 600ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು, ಕೆಲವರು 5 ಲಕ್ಷದಿಂದ 10 ಲಕ್ಷ ರೂಪಾಯಿವರೆಗೂ ಹಣ ಹೂಡಿಕೆ ಮಾಡಿದ್ದರು. ಆದರೆ, ಕಳೆದ ಒಂದು ವರ್ಷದಿಂದ ಸುಧಾ ದಂಪತಿ ಚೀಟಿ ಹಣ ವಾಪಸ್ ಕೊಡದೇ ವಿಳಂಬ ಮಾಡುತ್ತಿದ್ದರು.

ಪರಾರಿ ಆಗಿರುವ ಘಟನೆ ಜೂನ್ 3ರಂದು ಮಧ್ಯರಾತ್ರಿ ನಡೆದಿದೆ. ತಮ್ಮ ಇಬ್ಬರು ಮಕ್ಕಳೊಂದಿಗೆ ದಂಪತಿ ಮನೆಯನ್ನೇ ಬಿಟ್ಟು ಓಡಿದ್ದಾರೆ. ಈ ಹಿಂದೆ ಬ್ಯಾಂಕ್‌ನಲ್ಲಿ ಇರುವ ಚಿನ್ನವಸ್ತುಗಳನ್ನು ತೆಗೆದು, ಮೊಬೈಲ್‌ಗಳನ್ನು ಮನೆಯಲ್ಲೇ ಬಿಟ್ಟು, ಬೇರೆ ವಸ್ತುಗಳೊಂದಿಗೆ ನಾಪತ್ತೆಯಾಗಿದ್ದಾರೆ.

ಅವರ ಮನೆಯವರು ಮರುದಿನವೇ ಪುಟ್ಟೇನಹಳ್ಳಿ ಠಾಣೆಗೆ ಕಾಣೆಯಾದ ದೂರು ನೀಡಿದ್ದು, ಬಳಿಕ ಹಣ ಕಳೆದುಕೊಂಡ ಸಾರ್ವಜನಿಕರೂ ಒಟ್ಟುಗೂಡಿ FIR ದಾಖಲಿಸಿದ್ದಾರೆ. ಇದೀಗ ಪುಟ್ಟೇನಹಳ್ಳಿ ಠಾಣೆಯ ಪೊಲೀಸರು ಮೂರು ವಿಶೇಷ ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ. ಆದರೆ ಇದುವರೆಗೂ ಸುಧಾ ಮತ್ತು ಸಿದ್ದಾಚಾರಿ ಅವರು ಸುಳಿವು ಸಹ ಬಿಟ್ಟಿಲ್ಲ. ಮೊಬೈಲ್‌ ಬಳಸುವುದು ಇಲ್ಲ, ಸಂಬಂಧಿಕರಿಗೂ ಸಂಪರ್ಕವಿಲ್ಲ – ಇದರಿಂದಾಗಿ ಅವರು ಭೂಗತ ಜೀವನದತ್ತ ತಿರುಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ವಂಚನೆಗೆ ಒಳಪಟ್ಟ ಸಾರ್ವಜನಿಕರು ಗೃಹ ಸಚಿವ ಜಿ. ಪರಮೇಶ್ವರ್ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೊರೆ ಹೋಗಿದ್ದಾರೆ. ಆರೋಪಿಗಳನ್ನು ಶೀಘ್ರ ಬಂಧಿಸಿ, ನ್ಯಾಯ ನೀಡಬೇಕೆಂದು ಮನವಿ ಸಲ್ಲಿಸಲಾಗಿದೆ.

ಈ ಪ್ರಕರಣವು ಮತ್ತೆ ಒಮ್ಮೆ ಖಾಸಗಿ ಚೀಟಿ ವ್ಯವಹಾರಗಳ ಅಪಾಯವನ್ನು ಸಾಬೀತು ಪಡಿಸಿದೆ. ಸಾರ್ವಜನಿಕರು ಈ ತರಹದ ಹೂಡಿಕೆಗಳಲ್ಲಿ ಎಚ್ಚರಿಕೆಯಿಂದ ಇರಬೇಕಾದ ಅವಶ್ಯಕತೆಯನ್ನು ನೆನಪಿಸಿದೆ.

error: Content is protected !!