ಕಲಬುರಗಿ: ಸಾವಿರಾರು ರೂಪಾಯಿ ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ವೇಳೆ ಕಲಬುರಗಿಯ 5ನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಹಾಯಕ ಸರ್ಕಾರಿ ಅಭಿಯೋಜಕ (ಎಪಿಪಿ) ಸಂತೋಷ್ ಕುಮಾರ ಲೋಖಂಡೆ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದಾರೆ.

ರಾಹುಲ್ ಹೈದರಾಬಾದ್ ಎಂಬವರ ನ್ಯಾಯಾಲಯದ ಪ್ರಕರಣದಲ್ಲಿ ರಾಜಿ ಅರ್ಜಿ ಸಲ್ಲಿಕೆಗೆ ಸಂಬಂಧಿಸಿದ ಬಾಕಿ ಕೆಲಸ ಪೂರ್ಣಗೊಳಿಸುವುದಾಗಿ ಹೇಳಿ ಆರೋಪಿ ₹10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದಾನೆ ಎನ್ನಲಾಗಿದೆ. ಅಲ್ಲದೆ, ನಗದು ಹಣದ ಜೊತೆಗೆ 9 ಸೀರೆಗಳು, 4 ಶರ್ಟ್‌ಗಳು, 4 ಜೀನ್ಸ್ ಪ್ಯಾಂಟ್‌ಗಳು, ಒಂದು ಜೋಡಿ ಶೂ, 4 ಮಹಿಳೆಯರ ಉಡುಪುಗಳು ಹಾಗೂ 6 ಜೋಡಿ ಮಹಿಳೆಯರ ಚಪ್ಪಲಿಗಳನ್ನು ನೀಡುವಂತೆಯೂ ಒತ್ತಾಯಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ದೂರು ದಾಖಲಾದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್ ಅರುಣ್ ಕುಮಾರ್ ಅವರ ನೇತೃತ್ವದ ತಂಡ ನ್ಯಾಯಾಲಯ ಸಂಕೀರ್ಣದ ಸಮೀಪ ಬಲೆ ಬೀಸಿ ಕಾರ್ಯಾಚರಣೆ ನಡೆಸಿತು. ಈ ವೇಳೆ ಆರೋಪಿ ₹10 ಸಾವಿರ ಲಂಚದ ಹಣವನ್ನು ಸ್ವೀಕರಿಸುತ್ತಿದ್ದಾಗ ಅಧಿಕಾರಿಗಳು ರೆಡ್‌ಹ್ಯಾಂಡ್ ಆಗಿ ಬಂಧಿಸಿದರು.

ಆರೋಪಿಯ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಘಟನೆಯ ಕುರಿತು ಲೋಕಾಯುಕ್ತ ಅಧಿಕಾರಿಗಳು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Related News

error: Content is protected !!