
ವಡೋದರಾ: ಸಾಮಾನ್ಯವಾಗಿ ಮುಂಜಾನೆ 3 ಗಂಟೆ ಎಂದರೆ ಬಹುತೇಕರು ಗಾಢ ನಿದ್ರೆಯಲ್ಲಿರುವ ಸಮಯ. ರಸ್ತೆಗಳು ಕೂಡ ನಿರ್ಜನವಾಗಿರುತ್ತವೆ. ಆದರೆ ಗುಜರಾತ್ನ ವಡೋದರಾದ ಈ ಮಹಿಳೆ ಮಾತ್ರ ಆ ಹೊತ್ತಿನಲ್ಲೂ ಆಟೋ ಓಡಿಸುತ್ತಾ ರಸ್ತೆಯಲ್ಲಿರುತ್ತಾರೆ. ಅವರ ಈ ಕೆಲಸದ ಹಿಂದಿರುವ ಕಾರಣ ತಿಳಿದರೆ ನಿಜಕ್ಕೂ ಮೆಚ್ಚುಗೆ ವ್ಯಕ್ತಪಡಿಸಲೇಬೇಕು.
ಇತ್ತೀಚೆಗೆ ಸನ್ಯಮ್ ಗಾರ್ಗ್ ಎಂಬ ಇನ್ಸ್ಟಾಗ್ರಾಂ ಬಳಕೆದಾರರು ಮುಂಜಾನೆ 3 ಗಂಟೆಗೆ ಮನೆಗೆ ಹಿಂದಿರುಗುತ್ತಿದ್ದ ವೇಳೆ ಮಹಿಳೆಯೊಬ್ಬರು ತಮ್ಮ ಪತಿಯೊಂದಿಗೆ ಆಟೋ ಓಡಿಸುತ್ತಿರುವುದನ್ನು ಗಮನಿಸಿದ್ದಾರೆ. ಕುತೂಹಲದಿಂದ ಅವರೊಂದಿಗೆ ಮಾತನಾಡಿದಾಗ, ಈ ಮಹಿಳೆಯ ಸೇವಾ ಮನೋಭಾವದ ಬಗ್ಗೆ ಹಲವು ವಿಚಾರಗಳು ತಿಳಿದುಬಂದಿವೆ.
ಪತಿಯೇ ಆಟೋ ಚಾಲನೆ ಕಲಿಸಿದ್ರು
ಈ ಮಹಿಳೆಯ ಪತಿಯೂ ಆಟೋ ಚಾಲಕರಾಗಿದ್ದಾರೆ. ಪತ್ನಿ ಯಾರ ಮೇಲೂ ಅವಲಂಬಿತರಾಗದೆ ಸ್ವಾವಲಂಬಿಯಾಗಿ ಬದುಕಬೇಕು ಎಂಬ ಉದ್ದೇಶದಿಂದ ಪತಿಯೇ ಅವರಿಗೆ ಆಟೋ ಚಾಲನೆ ಕಲಿಸಿದ್ದಾರೆ. ಇದೀಗ ದಂಪತಿ ಇಬ್ಬರೂ ಕಷ್ಟಪಟ್ಟು ದುಡಿಯುತ್ತಾ ತಮ್ಮ ಇಬ್ಬರು ಮಕ್ಕಳ ಭವಿಷ್ಯ ಕಟ್ಟುತ್ತಿದ್ದಾರೆ.
ಆದರೆ ಈ ಮಹಿಳೆಯ ಆಟೋ ಚಾಲನೆಯ ಉದ್ದೇಶ ಕೇವಲ ಹಣ ಸಂಪಾದಿಸುವುದಲ್ಲ ಎಂಬುದು ವಿಶೇಷ.
ಗರ್ಭಿಣಿಯರು, ರೋಗಿಗಳು ಮತ್ತು ಒಂಟಿ ಮಹಿಳೆಯರಿಗೆ ಉಚಿತ ಸೇವೆ!
ರಾತ್ರಿ ವೇಳೆ ತುರ್ತು ಪರಿಸ್ಥಿತಿ ಎದುರಾದಾಗ ಮಹಿಳೆಯರು, ಮಕ್ಕಳು, ವೃದ್ಧರು ಹಾಗೂ ರೋಗಿಗಳಿಗೆ ವಾಹನ ಸಿಗುವುದು ಕಷ್ಟವಾಗುತ್ತದೆ. ಈ ಸಮಸ್ಯೆಯನ್ನು ಅರಿತಿರುವ ಮಹಿಳಾ ಆಟೋ ಚಾಲಕಿ, ತಡರಾತ್ರಿಯಲ್ಲೂ ಅಗತ್ಯವಿರುವವರಿಗೆ ನೆರವಾಗಲು ಮುಂದಾಗುತ್ತಾರೆ.
ವಿಶೇಷವಾಗಿ ಗರ್ಭಿಣಿಯರು, ಅನಾರೋಗ್ಯದಿಂದ ಬಳಲುತ್ತಿರುವವರು ಹಾಗೂ ಒಂಟಿಯಾಗಿ ಪ್ರಯಾಣಿಸುವ ಮಹಿಳೆಯರು ಆಸ್ಪತ್ರೆಗೆ ತೆರಳಬೇಕಾದ ಸಂದರ್ಭದಲ್ಲಿ ಅವರಿಂದ ಹಣ ಪಡೆಯದೆ ಉಚಿತವಾಗಿ ಆಟೋ ಸೇವೆ ನೀಡುತ್ತಾರೆ ಎನ್ನಲಾಗಿದೆ.
ಪ್ರಯಾಣಿಕರು ಹಣ ನೀಡಲು ಮುಂದಾದರೂ, ತುರ್ತು ಪರಿಸ್ಥಿತಿಯಲ್ಲಿರುವವರಿಂದ ಹಣ ಪಡೆಯಲು ಅವರು ನಿರಾಕರಿಸುತ್ತಾರೆ.
“ಹಣ ಸಂಪಾದನೆ ಮಾತ್ರ ನನ್ನ ಗುರಿಯಲ್ಲ”
“ಕೇವಲ ಹಣ ಸಂಪಾದಿಸುವುದಷ್ಟೇ ನನ್ನ ಗುರಿಯಲ್ಲ. ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು. ವಿಶೇಷವಾಗಿ ಮಹಿಳೆಯರಿಗೆ ರಾತ್ರಿ ಸಮಯದಲ್ಲೂ ಸುರಕ್ಷಿತವಾಗಿ ಪ್ರಯಾಣಿಸುವ ಭರವಸೆ ಮೂಡಿಸಬೇಕು” ಎಂಬುದು ಅವರ ಆಶಯ ಎನ್ನಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ
ಸನ್ಯಮ್ ಗಾರ್ಗ್ ಅವರು ಹಂಚಿಕೊಂಡಿರುವ ಈ ಮಹಿಳೆಯ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅವರ ಮಾನವೀಯತೆ ಮತ್ತು ಸೇವಾ ಮನೋಭಾವಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ರಾತ್ರಿ 3 ಗಂಟೆಯಲ್ಲೂ ಸ್ವಾರ್ಥವಿಲ್ಲದೆ ಸಂಕಷ್ಟದಲ್ಲಿರುವವರಿಗೆ ನೆರವಾಗುತ್ತಿರುವ ಈ ಮಹಿಳೆ, ನಿಜಕ್ಕೂ ಸಮಾಜದ ‘ರಿಯಲ್ ಹೀರೋ’ ಎಂದು ಹಲವರು ಕೊಂಡಾಡುತ್ತಿದ್ದಾರೆ.






