ಹೈದರಾಬಾದ್: ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲಿ ಮಹಿಳಾ ಸಾಫ್ಟ್‌ವೇರ್ ಎಂಜಿನಿಯರ್‌ ಸಾವಿನ ಪ್ರಕರಣವು ಹಲವು ನಿಗೂಢ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ತೇಜಸ್ವಿನಿ ಎಂಬ ಮಹಿಳೆ ದೇವಿಯ ವಿಗ್ರಹವನ್ನು ಹೊತ್ತುಕೊಂಡೇ ಕೊಳಕ್ಕೆ ಹಾರಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದ್ದು, ಇದೀಗ ಪೊಲೀಸರು ನಾಪತ್ತೆಯಾಗಿರುವ ವಿಗ್ರಹಕ್ಕಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ತೇಜಸ್ವಿನಿ ಸಾವಿಗೆ ಕೆಲವೇ ಕ್ಷಣಗಳ ಮೊದಲು ದೇವಾಲಯಕ್ಕೆ ತೆರಳಿದ್ದಳು. ಅಲ್ಲಿ ಬೆತ್ತಲೆಯಾಗಿ ದೇವಾಲಯ ಪ್ರವೇಶಿಸಿ, ಅಮ್ಮಾವರ ದೇವಿಯ ವಿಗ್ರಹವನ್ನು ಎತ್ತಿಕೊಂಡು ಸಮೀಪದ ಕೊಳದತ್ತ ಹೋಗಿದ್ದಾಳೆ. ಬಳಿಕ ವಿಗ್ರಹದೊಂದಿಗೆ ನೀರಿಗೆ ಹಾರಿದ್ದಾಳೆ ಎನ್ನಲಾಗಿದೆ. ಆಕೆಯ ಮೃತದೇಹ ಪತ್ತೆಯಾಗಿದ್ದರೂ, ವಿಗ್ರಹ ಇನ್ನೂ ಸಿಕ್ಕಿಲ್ಲ.

ಈ ವಿಗ್ರಹವು ಪ್ರಕರಣದ ಪ್ರಮುಖ ಸಾಕ್ಷ್ಯವಾಗಿರಬಹುದೆಂದು ಶಂಕಿಸಿರುವ ಅಧಿಕಾರಿಗಳು, ವಿಪತ್ತು ನಿರ್ವಹಣಾ ಪಡೆಯ ಸಹಾಯದಿಂದ ದೋಣಿ ಹಾಗೂ ವಿಶೇಷ ಸಿಬ್ಬಂದಿಯನ್ನು ನಿಯೋಜಿಸಿ ಕೊಳದಲ್ಲಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಇದೇ ವೇಳೆ, ತೇಜಸ್ವಿನಿಯ ತಾಯಿ ಅರುಣಾ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ತೇಜಸ್ವಿನಿ ಸಾವಿಗೂ ಮುನ್ನ ಬರೆದಿದ್ದಾಳೆ ಎನ್ನಲಾದ ಡೆತ್‌ನೋಟ್‌ನ್ನು ಪರಿಶೀಲಿಸಲಾಗುತ್ತಿದ್ದು, ಆಕೆಯ ಮೊಬೈಲ್ ಕರೆಗಳ ವಿವರ, ಹಣಕಾಸು ವ್ಯವಹಾರಗಳು ಹಾಗೂ ಕೊನೆಯ ದಿನಗಳ ಚಲನವಲನಗಳ ಬಗ್ಗೆ ತನಿಖೆ ನಡೆಯುತ್ತಿದೆ.

ಪ್ರಾಥಮಿಕ ತನಿಖೆಯಲ್ಲಿ ತೇಜಸ್ವಿನಿ ಹೈದರಾಬಾದ್‌ನಲ್ಲಿರುವ ಬಾಡಿಗೆ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದಳು ಎಂಬುದು ತಿಳಿದುಬಂದಿದೆ. ತಿಂಗಳಿಗೆ ಸುಮಾರು ₹1 ಲಕ್ಷ ಬಾಡಿಗೆ ಪಾವತಿಸುತ್ತಿದ್ದಳು ಎನ್ನಲಾಗಿದ್ದು, ಆಕೆ ವಾಸಿಸುತ್ತಿದ್ದ ಕಟ್ಟಡದ ಮೇಲಿನ ಎರಡು ಮಹಡಿಗಳು ಲಾಡ್ಜ್ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದವು ಎಂಬ ಮಾಹಿತಿಯೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಕಟ್ಟಡ ಅಥವಾ ಅಲ್ಲಿನ ನಿವಾಸಿಗಳಿಗೆ ಪ್ರಕರಣದೊಂದಿಗೆ ಯಾವುದೇ ಸಂಬಂಧವಿದೆಯೇ ಎಂಬುದನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಸದ್ಯ ತೇಜಸ್ವಿನಿಯ ಸಾವಿನ ಹಿಂದಿನ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಸಿಸಿಟಿವಿ ದೃಶ್ಯಾವಳಿ, ಸಾಕ್ಷಿದಾರರ ಹೇಳಿಕೆಗಳು ಹಾಗೂ ವಿಧಿವಿಜ್ಞಾನ ವರದಿಗಳ ಆಧಾರದ ಮೇಲೆ ತನಿಖೆ ಮುಂದುವರಿದಿದೆ. ಪ್ರಾಥಮಿಕವಾಗಿ ಆತ್ಮಹತ್ಯೆಯ ಶಂಕೆ ವ್ಯಕ್ತವಾಗಿದ್ದರೂ, ಎಲ್ಲಾ ಆಯಾಮಗಳಲ್ಲೂ ಪ್ರಕರಣವನ್ನು ಸೂಕ್ಷ್ಮವಾಗಿ ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related News

error: Content is protected !!