ಹೈದರಾಬಾದ್: ರಾಷ್ಟ್ರೀಯ ಪೊಲೀಸ್ ಅಕಾಡೆಮಿ (NPA)ಯಲ್ಲಿ ತರಬೇತಿ ಪಡೆಯುತ್ತಿರುವ ಭಾರತೀಯ ಪೊಲೀಸ್ ಸೇವೆ (IPS) ಅಧಿಕಾರಿಣಿಗೆ ಲೈಂಗಿಕ ಕಿರುಕುಳ, ಹಲ್ಲೆ, ಬೆದರಿಕೆ ಹಾಗೂ ಡಿಜಿಟಲ್ ಕಿರುಕುಳ ನೀಡಿದ ಆರೋಪದ ಮೇಲೆ ಸಹ ತರಬೇತಿ ಐಪಿಎಸ್ ಅಧಿಕಾರಿ ಉದಯ್ ಕೃಷ್ಣ ರೆಡ್ಡಿ ವಿರುದ್ಧ ಹೈದರಾಬಾದ್ನ ಅತ್ತಾಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
30 ವರ್ಷದ ತರಬೇತಿ ಐಪಿಎಸ್ ಅಧಿಕಾರಿಣಿ ನೀಡಿರುವ ದೂರಿನ ಪ್ರಕಾರ, ಜೂನ್ 23ರಿಂದಲೇ ಆರೋಪಿ ಉದಯ್ ಕೃಷ್ಣ ರೆಡ್ಡಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ವಾಟ್ಸಾಪ್ ಮೂಲಕ ಅಶ್ಲೀಲ ಸಂದೇಶಗಳನ್ನು ಕಳುಹಿಸುವುದು, ಇತರ ತರಬೇತಿ ಅಧಿಕಾರಿಗಳ ಮುಂದೆ ಅವಹೇಳನಕಾರಿ ಮಾತುಗಳನ್ನಾಡುವುದು ಹಾಗೂ ಅವರ ವೈಯಕ್ತಿಕ ಜೀವನದ ಬಗ್ಗೆ ಸುಳ್ಳು ವದಂತಿಗಳನ್ನು ಹರಡುವ ಮೂಲಕ ಮಾನಸಿಕ ಕಿರುಕುಳ ನೀಡಿದ್ದಾಗಿ ಆರೋಪಿಸಲಾಗಿದೆ.
ಇದಲ್ಲದೆ, ಮತ್ತೊಬ್ಬ ತರಬೇತಿ ಅಧಿಕಾರಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಆಧಾರರಹಿತ ಆರೋಪ ಮಾಡುತ್ತಾ, ಅದನ್ನು ಒಪ್ಪಿಕೊಳ್ಳುವಂತೆ ಪದೇ ಪದೇ ಒತ್ತಡ ಹೇರಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆಯೂ ಅಧಿಕಾರಿಣಿ ಆರೋಪಿಸಿದ್ದಾರೆ.
ಜುಲೈ 8ರಂದು ಆರೋಪಿ ತನ್ನ ಮೊಬೈಲ್ ಫೋನ್ ಅನ್ನು ಅಧಿಕಾರಿಣಿಯ ಕೊಠಡಿಗೆ ತೆಗೆದುಕೊಂಡು ಹೋಗಿ, ಬಲವಂತವಾಗಿ ಪಾಸ್ವರ್ಡ್ ಕೇಳಿ ಅವರ ವೈಯಕ್ತಿಕ ಸಂದೇಶಗಳನ್ನು ಪರಿಶೀಲಿಸಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ. ಅಲ್ಲದೆ, ಅಧಿಕಾರಿಣಿಯ ಒಪ್ಪಿಗೆಯಿಲ್ಲದೆ ಖಾಸಗಿ ವಿಡಿಯೊವನ್ನು ರಹಸ್ಯವಾಗಿ ಚಿತ್ರೀಕರಿಸಿ, ಅದನ್ನು ಅವರ ಪತಿಗೆ ಕಳುಹಿಸುವ ಮೂಲಕ ಬ್ಲ್ಯಾಕ್ಮೇಲ್ ಹಾಗೂ ಮಾನಹಾನಿ ಮಾಡಲು ಯತ್ನಿಸಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.
ಜುಲೈ 9ರ ರಾತ್ರಿ ಆರೋಪಿ ಅಧಿಕಾರಿಣಿಯನ್ನು ಬಲವಂತವಾಗಿ ತನ್ನ ಕೊಠಡಿಗೆ ಕರೆದೊಯ್ದು, ಕೂದಲು ಹಿಡಿದು ಎಳೆದು, ಕತ್ತು ಹಿಸುಕಲು ಯತ್ನಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಲ್ಲದೆ, ಚಾಕು ತೋರಿಸಿ ಬೆದರಿಕೆ ಹಾಕಿ, ಲೈಂಗಿಕ ದೌರ್ಜನ್ಯ ಎಸಗಲು ಹಾಗೂ ಖಾಸಗಿ ಅಂಗಗಳನ್ನು ಮುಟ್ಟಲು ಪ್ರಯತ್ನಿಸಿದ್ದಾನೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. ಜುಲೈ 10ರಂದು ಮತ್ತೆ ಹಲ್ಲೆ ನಡೆಸಿದ್ದಾನೆ ಎಂಬ ಆರೋಪವೂ ದಾಖಲಾಗಿದೆ.
ದೂರಿನ ಆಧಾರದ ಮೇಲೆ ಅತ್ತಾಪುರ ಪೊಲೀಸರು ಹಲ್ಲೆ, ಕ್ರಿಮಿನಲ್ ಬೆದರಿಕೆ, ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದ ವಿವಿಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ಗಳು ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ-2008ರ ಸಂಬಂಧಿತ ವಿಧಿಗಳ ಅಡಿಯಲ್ಲಿ ಎಫ್ಐಆರ್ ಸಂಖ್ಯೆ 824/2026 ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
