
ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮೇಲಿನ ದೌರ್ಜನ್ಯ ಪ್ರಕರಣಗಳ ತನಿಖೆ ನಡೆಸುವ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ (DCRE)ದಲ್ಲಿಯೇ ದಲಿತ ಅಧಿಕಾರಿಗೆ ಕಿರುಕುಳ ನೀಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಪಶ್ಚಿಮ ವಲಯದ DCRE ಪೊಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸ್, ಕೇಂದ್ರ ಕಚೇರಿಯ ಎಸ್‌ಪಿ ಕರಿಬಸನಗೌಡ ಮತ್ತು ಡಿವೈಎಸ್‌ಪಿ ಮಹೇಶ್ವರಗೌಡ ವಿರುದ್ಧ ನೇರವಾಗಿ ಡಿಸಿಆರ್‌ಇ ಡಿಜಿ ಉಮೇಶ್ ಕುಮಾರ್ ಅವರಿಗೆ ದೂರು ಸಲ್ಲಿಸಿದ್ದಾರೆ.
ಶ್ರೀನಿವಾಸ್ ಆರೋಪದ ಪ್ರಕಾರ, ಮೇಲ್ಜಾತಿ ಆರೋಪಿಗಳ ಪರ ಅಂತಿಮ ವರದಿ ಸಲ್ಲಿಸುವಂತೆ ಒತ್ತಡ ಹೇರಲಾಗುತ್ತಿತ್ತು. ಕೆಲ ಪ್ರಕರಣಗಳಲ್ಲಿ ಎಸ್‌ಪಿ ನಿರ್ದೇಶನದಂತೆ ಡಿವೈಎಸ್‌ಪಿ ಮೂಲಕ ಒತ್ತಡ ತರುವ ಪ್ರಯತ್ನ ನಡೆದಿದೆ ಎಂದು ಅವರು ತಿಳಿಸಿದ್ದಾರೆ. ಈ ವಿಚಾರದಲ್ಲಿ ತಾವು ವಿರೋಧ ವ್ಯಕ್ತಪಡಿಸಿದ ನಂತರದಿಂದಲೇ ಕಿರುಕುಳ ಹೆಚ್ಚಾಗಿದೆ ಎಂದು ದೂರಿದ್ದಾರೆ.
ಇದಲ್ಲದೆ, ತಮ್ಮ ವಿರುದ್ಧ ಸುಳ್ಳು ಪಿಟಿಷನ್‌ಗಳನ್ನು ಪಡೆದು ತನಿಖೆ ಹೆಸರಿನಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿರುವ ಅವರು, ಈ ಕುರಿತು ವೀಡಿಯೋ ಕೂಡ ಬಿಡುಗಡೆ ಮಾಡಿದ್ದಾರೆ. ಕಳೆದ ತಿಂಗಳು ತಮಗೆ ನೀಡಿದ ವರ್ಗಾವಣೆಗೆ ವಿರುದ್ಧವಾಗಿ KATನಲ್ಲಿ ಸ್ಟೇ ಪಡೆದಿದ್ದರೂ, ನಕಲಿ ದಾಖಲೆ ಸೃಷ್ಟಿಸಿ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಈ ರೀತಿಯ ಕಿರುಕುಳ ಮುಂದುವರಿದರೆ ಆತ್ಮಹತ್ಯೆ ಮಾಡುವ ಎಚ್ಚರಿಕೆಯನ್ನು ಕೂಡ ಅವರು ವ್ಯಕ್ತಪಡಿಸಿದ್ದಾರೆ.
ಇತ್ತ, ತಮ್ಮ ವಿರುದ್ಧ ಬಂದಿರುವ ಎಲ್ಲಾ ಆರೋಪಗಳನ್ನು ಎಸ್‌ಪಿ ಕರಿಬಸನಗೌಡ ತಳ್ಳಿಹಾಕಿದ್ದಾರೆ. ಶ್ರೀನಿವಾಸ್ ಆರೋಪಗಳಿಗೆ ಯಾವುದೇ ಆಧಾರವಿಲ್ಲ, ಅವು ಕಪೋಲಕಲ್ಪಿತ ಎಂದು ತಿಳಿಸಿದ್ದಾರೆ. ತಮ್ಮ ಹಾಗೂ ಡಿವೈಎಸ್‌ಪಿ ಮಹೇಶ್ವರಗೌಡರ ನಡುವೆ ಹೆಚ್ಚಿನ ಸಂಪರ್ಕವೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಂತಿಮ ವರದಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಕೇಂದ್ರ ಕಚೇರಿಯ ಪಾತ್ರವಿಲ್ಲ ಎಂದೂ ಹೇಳಿದ್ದಾರೆ.
ಈ ಪ್ರಕರಣ ಇದೀಗ ಪೊಲೀಸ್ ಇಲಾಖೆಯೊಳಗಿನ ವಿವಾದಕ್ಕೆ ಕಾರಣವಾಗಿದ್ದು, ಮುಂದಿನ ಕ್ರಮಗಳ ಬಗ್ಗೆ ಕುತೂಹಲ ಮೂಡಿಸಿದೆ.






