ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ವಿಷಯಕ್ಕೆ ಗ್ರೇಡ್ ಬದಲು ಅಂಕ ನೀಡಬೇಕು ಎಂದು ಹೈಕೋರ್ಟ್ ಮತ್ತೊಮ್ಮೆ ಸ್ಪಷ್ಟ ಆದೇಶ ನೀಡಿದೆ. ಈ ಕುರಿತು ಸರ್ಕಾರ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದ್ದು, 2025-26ನೇ ಸಾಲಿಗೆ ಹಿಂದಿ ವಿಷಯಕ್ಕೆ ಅಂಕಗಳನ್ನೇ ನೀಡಬೇಕೆಂದು ಸೂಚಿಸಿದೆ.
ನ್ಯಾಯಮೂರ್ತಿ ಇಂದಿರೇಶ್ ಅವರ ಪೀಠ ಈ ತೀರ್ಪು ನೀಡಿದ್ದು, ಪರೀಕ್ಷೆಯ ನಂತರ ನಿಯಮ ಬದಲಿಸುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಪರೀಕ್ಷೆಯ ಅಧಿಸೂಚನೆ ಹೊರಡಿಸುವ ಮೊದಲುಲೇ ಇಂತಹ ನಿಯಮಗಳನ್ನು ರೂಪಿಸಬೇಕಿತ್ತು ಎಂದು ನ್ಯಾಯಾಲಯ ತಿಳಿಸಿದೆ.
ಹಿಂದಿ ವಿಷಯದಲ್ಲಿ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದ ಹಿನ್ನೆಲೆ, ವಿದ್ಯಾರ್ಥಿಗಳ ಮೇಲಿನ ಒತ್ತಡ ಕಡಿಮೆ ಮಾಡಲು ಸರ್ಕಾರ ಗ್ರೇಡ್ ಪದ್ದತಿಯನ್ನು ಜಾರಿಗೆ ತರಲು ನಿರ್ಧರಿಸಿತ್ತು. ಆದರೆ ಈ ಕ್ರಮವನ್ನು ನ್ಯಾಯಾಲಯ ಪ್ರಶ್ನಿಸಿ, ಪರೀಕ್ಷೆಯ ಬಳಿಕ ನಿಯಮ ಬದಲಾವಣೆ ಮಾಡುವುದು ಸೂಕ್ತವಲ್ಲ ಎಂದು ಹೇಳಿದೆ.
“ಪಿಯುಸಿ ಪರೀಕ್ಷೆಯಲ್ಲಿ 83% ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿರುವಾಗ, ಎಸ್‌ಎಸ್‌ಎಲ್‌ಸಿಯಲ್ಲಿ ಎಲ್ಲರನ್ನೂ ಪಾಸ್ ಮಾಡಬೇಕೆಂದರೆ ಪರೀಕ್ಷೆಯ ಅರ್ಥವೇನು?” ಎಂದು ನ್ಯಾಯಾಲಯ ಪ್ರಶ್ನಿಸಿದೆ. ನಿಯಮ ರೂಪಿಸಿದ ಬಳಿಕವೇ ಪರೀಕ್ಷೆ ನಡೆಸಬೇಕಾಗಿತ್ತು ಎಂದು ಕೋರ್ಟ್ ಸೂಚಿಸಿದೆ.
ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ತಿದ್ದುಪಡಿ ನಿಯಮಗಳನ್ನು ರೂಪಿಸಲಾಗುತ್ತಿದೆ ಎಂದು ವಾದ ಮಂಡಿಸಿದರೂ, ನ್ಯಾಯಾಲಯ ಅದನ್ನು ಅಂಗೀಕರಿಸಲಿಲ್ಲ. ಇದರಿಂದ ಸರ್ಕಾರಕ್ಕೆ ದೊಡ್ಡ ಹಿನ್ನಡೆಯಾಗಿದೆ.
ಇದೀಗ ತೀರ್ಪಿನ ಪ್ರಕಾರ, ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯ ನಿರ್ಣಯ ಮಂಡಳಿ (ಕೆಎಸ್‌ಇಎಬಿ) ಫಲಿತಾಂಶ ಪ್ರಕಟಿಸಬೇಕಿದೆ. ಏಪ್ರಿಲ್ 24ರಂದು ಫಲಿತಾಂಶ ಪ್ರಕಟಿಸುವ ಯೋಜನೆ ಇದ್ದು, ಪ್ರಕರಣ ಇತ್ಯರ್ಥಗೊಂಡಿರುವುದರಿಂದ ಶೀಘ್ರದಲ್ಲೇ ಫಲಿತಾಂಶ ಹೊರಬೀಳುವ ನಿರೀಕ್ಷೆ ಇದೆ.
ಈಗಾಗಲೇ ಮೌಲ್ಯಮಾಪನ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, ಹಿಂದಿ ಸೇರಿದಂತೆ ತೃತೀಯ ಭಾಷೆಗಳ ಉತ್ತರ ಪತ್ರಿಕೆಗಳಿಗೆ ಮೌಲ್ಯಮಾಪಕರು ಅಂಕಗಳನ್ನೇ ನಮೂದಿಸಿದ್ದಾರೆ.
ಈ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಒಟ್ಟು 8.30 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಇವರಲ್ಲಿ 4.25 ಲಕ್ಷ ಬಾಲಕರು ಮತ್ತು 4.05 ಲಕ್ಷ ಬಾಲಕಿಯರು ಸೇರಿದ್ದಾರೆ.
