ಸೋಶಿಯಲ್ ಮೀಡಿಯಾ ರೀಲ್ಸ್ ಮಾಡಲು ಅಪಾಯಕಾರಿ ಸ್ಟಂಟ್‌ಗೆ ಮುಂದಾದ ಮೂವರು ಯುವಕರು ಭೀಕರ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ರೇವಾ ಜಿಲ್ಲೆಯ ಮೌಗಂಜ್ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 135ರಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪಲ್ಸರ್ 220 ಬೈಕ್‌ನಲ್ಲಿ ಅತೀವೇಗದಲ್ಲಿ ಸಂಚರಿಸುತ್ತಿದ್ದ ಮೂವರು ಯುವಕರು, ರೀಲ್ಸ್ ಚಿತ್ರೀಕರಣಕ್ಕಾಗಿ ಅಪಾಯಕಾರಿ ಸ್ಟಂಟ್ ಮಾಡುತ್ತಿದ್ದರು. ಒಬ್ಬ ಯುವಕ ಕೈಯಲ್ಲಿ ಗನ್ ಮಾದರಿಯ ಲೈಟರ್ ಹಿಡಿದು ಪ್ರದರ್ಶನ ಮಾಡುತ್ತಿದ್ದರೆ, ಉಳಿದಿಬ್ಬರು ಕೂಗಿ ಆನಂದಿಸುತ್ತಿದ್ದರು. ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಇದ್ದರೂ ಅವುಗಳನ್ನು ತಪ್ಪಿಸಿಕೊಂಡು ಬೈಕ್ ಚಲಾಯಿಸುತ್ತಿದ್ದರು.
ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ಯುವಕರು ಮೊಬೈಲ್‌ನಲ್ಲಿ ರೀಲ್ಸ್ ರೆಕಾರ್ಡ್ ಮಾಡುತ್ತಿದ್ದ ವೇಳೆ ಗಮನ ಬೇರೆಡೆ ತಿರುಗಿದ್ದು, ಬೆಳಿಗ್ಗೆ ಸುಮಾರು 11 ಗಂಟೆ ವೇಳೆಗೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಟ್ರೇಲರ್ ಟ್ರಕ್‌ಗೆ ಬೈಕ್ ಭಾರೀ ವೇಗದಲ್ಲಿ ಢಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಅಪಘಾತದ ನಂತರ ಅದೇ ಟ್ರಕ್‌ಗೆ ಹಿಂದಿನಿಂದ ಬರುತ್ತಿದ್ದ ಮತ್ತೊಂದು ವಾಹನ ಕೂಡ ಡಿಕ್ಕಿ ಹೊಡೆದು ಅದರಲ್ಲಿದ್ದವರಿಗೆ ಗಂಭೀರ ಗಾಯಗಳಾಗಿವೆ.
ಅಪಘಾತದಲ್ಲಿ ಮೃತಪಟ್ಟವರನ್ನು ಉಪಲಕ್ಷ್ಯ ಕೋಲ್ (17), ಅಮರೀಶ್ ಕೋಲ್ (22) ಮತ್ತು ಹೇಮರಾಜ್ ಕೋಲ್ (17) ಎಂದು ಗುರುತಿಸಲಾಗಿದೆ. ಇವರು ಲಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಬೇಲಾ ಗ್ರಾಮದ ನಿವಾಸಿಗಳಾಗಿದ್ದಾರೆ.
ಘಟನೆಯ ಬಳಿಕ ಟ್ರೇಲರ್ ಟ್ರಕ್ ಅನ್ನು ಪೊಲೀಸರು ಜಪ್ತಿ ಮಾಡಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
