
ಮುಂಡಗೋಡ: ಅಂಗಡಿಗೆ ಬಂದು ವಿಮಲ್ ಹಾಗೂ ಕುಡಿಯುವ ನೀರು ಕೇಳುವ ನೆಪದಲ್ಲಿ ಮಹಿಳೆಯ ಗಮನ ಬೇರೆಡೆ ಸೆಳೆದ ದುಷ್ಕರ್ಮಿಗಳು, ಆಕೆಯ ಕೊರಳಲ್ಲಿದ್ದ ಚಿನ್ನದ ಸರಗಳನ್ನು ಕಿತ್ತುಕೊಂಡು ಕಾರಿನಲ್ಲಿ ಪರಾರಿಯಾಗಿರುವ ಘಟನೆ ತಾಲೂಕಿನ ಕರಗಿನಕೊಪ್ಪ ಗ್ರಾಮದಲ್ಲಿ ಹಾಡಹಗಲೇ ನಡೆದಿದೆ.
ನವೆಂಬರ್ 21ರಂದು ಮಧ್ಯಾಹ್ನ ಸುಮಾರು 3.45ರ ವೇಳೆಗೆ ಈ ಕೃತ್ಯ ನಡೆದಿದೆ. ಕರಗಿನಕೊಪ್ಪ ಗ್ರಾಮದ ಗೀತಾ ಲಮಾಣಿ ಅವರು ತಮ್ಮ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದಾಗ ಬಿಳಿ ಬಣ್ಣದ ಕಾರಿನಲ್ಲಿ ಬಂದ ಮೂವರು ಅಥವಾ ನಾಲ್ವರು ಅಪರಿಚಿತರು ಅಂಗಡಿಯ ಬಳಿ ನಿಂತಿದ್ದಾರೆ. ಅವರಲ್ಲಿ ಒಬ್ಬಾತ ಅಂಗಡಿಯೊಳಗೆ ಬಂದು ವಿಮಲ್ ಹಾಗೂ ಕುಡಿಯುವ ನೀರು ಕೇಳಿದ್ದಾನೆ.
ಮಹಿಳೆ ವಸ್ತುಗಳನ್ನು ನೀಡುವ ಸಂದರ್ಭದಲ್ಲಿ ಆಕೆಯ ಗಮನವನ್ನು ಬೇರೆಡೆ ಸೆಳೆದ ದುಷ್ಕರ್ಮಿ, ಏಕಾಏಕಿ ಕೊರಳಲ್ಲಿದ್ದ ಚಿನ್ನದ ಆಭರಣಗಳನ್ನು ಕಿತ್ತುಕೊಂಡಿದ್ದಾನೆ. ಬಳಿಕ ಹೊರಗೆ ಕಾರಿನಲ್ಲಿ ಕಾಯುತ್ತಿದ್ದ ತನ್ನ ಸಹಚರರೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
₹1.50 ಲಕ್ಷ ಮೌಲ್ಯದ ಚಿನ್ನಾಭರಣ ಕಳವು:
ಗೀತಾ ಲಮಾಣಿ ಅವರ ಕೊರಳಲ್ಲಿದ್ದ ಸುಮಾರು 15 ಗ್ರಾಂ ತೂಕದ ₹1 ಲಕ್ಷ ಮೌಲ್ಯದ ಚಿನ್ನದ ತಾಳಿ ಸರ ಹಾಗೂ 5 ಗ್ರಾಂ ತೂಕದ ₹50 ಸಾವಿರ ಮೌಲ್ಯದ ದೇವರ ಪದಕವಿದ್ದ ಸರವನ್ನು ಕಳ್ಳರು ಕದ್ದೊಯ್ದಿದ್ದಾರೆ. ಒಟ್ಟು 20 ಗ್ರಾಂ ತೂಕದ ಚಿನ್ನಾಭರಣಗಳ ಅಂದಾಜು ಮೌಲ್ಯ ₹1.50 ಲಕ್ಷ ಎಂದು ತಿಳಿದುಬಂದಿದೆ.
ಆರೋಪಿಯ ಚಹರೆ ವಿವರ:
ಚಿನ್ನದ ಸರ ಕಿತ್ತುಕೊಂಡು ಪರಾರಿಯಾದ ವ್ಯಕ್ತಿ ಬಿಳಿ ಬಣ್ಣದ ಉದ್ದತೋಳಿನ ಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಕಪ್ಪು ಟೋಪಿ ಹಾಗೂ ಬಿಳಿ ಶೂ ಧರಿಸಿದ್ದನು. ಗೋಧಿ ಮೈಬಣ್ಣ ಹೊಂದಿದ್ದ ಈತನ ಮುಖದ ಮೇಲೆ ಕಪ್ಪು ಬಣ್ಣದ ಕುರುಚಲು ಗಡ್ಡ ಮತ್ತು ಮೀಸೆ ಇತ್ತು ಎಂದು ದೂರಿನಲ್ಲಿ ವಿವರಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಗೀತಾ ಲಮಾಣಿ ಅವರು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಿಳಿ ಬಣ್ಣದ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ. ಹಾಡಹಗಲೇ ನಡೆದ ಈ ಕಳ್ಳತನದಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.






