
ವಿಚ್ಛೇದನದ ಮೂಲಕ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ಮುಂದಾಗಿದ್ದ ದಂಪತಿ, ಕೊನೆಯ ಕ್ಷಣದಲ್ಲಿ ಮತ್ತೆ ಒಂದಾದ ಅಪರೂಪದ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಮದುವೆಯಾಗಿ ಕೆಲವು ವರ್ಷಗಳ ಬಳಿಕ ದಂಪತಿ ನಡುವೆ ಮನಸ್ತಾಪ ಉಂಟಾಗಿದ್ದು, ಅದು ವಿಚ್ಛೇದನದ ಹಂತಕ್ಕೆ ತಲುಪಿತ್ತು. ಕುಟುಂಬಸ್ಥರು ಹಾಗೂ ಧಾರ್ಮಿಕ ಮುಖಂಡರ ಸಮ್ಮುಖದಲ್ಲಿ ಡಿವೋರ್ಸ್ ಪ್ರಕ್ರಿಯೆ ಆರಂಭಿಸಲಾಗಿತ್ತು. ಎಲ್ಲರ ಎದುರೇ ಪತ್ನಿ ವಿಚ್ಛೇದನದ ದಾಖಲೆಗಳಿಗೆ ಸಹಿ ಹಾಕಲು ಸಿದ್ಧಳಾಗಿದ್ದಳು. ಕೈಯಲ್ಲಿ ಪೆನ್ನು ಹಿಡಿದು ಸಹಿ ಹಾಕಲು ಮುಂದಾಗಿದ್ದಳು.
ಆದರೆ, ಈ ವೇಳೆ ಪತಿಯ ವರ್ತನೆ ಎಲ್ಲವನ್ನೂ ಬದಲಿಸಿತು. ಪತ್ನಿಯ ಪಕ್ಕದಲ್ಲೇ ಮೌನವಾಗಿ ನಿಂತಿದ್ದ ಪತಿ ಭಾವನಾತ್ಮಕವಾಗಿ ಕುಗ್ಗಿಹೋಗಿದ್ದ. ಏನನ್ನೋ ಹೇಳಲು ಬಯಸುತ್ತಿದ್ದರೂ ಮಾತುಗಳು ಹೊರಬರಲಿಲ್ಲ. ಆತನ ಕೈಗಳು ನಡುಗುತ್ತಿದ್ದವು. ಪತಿಯ ಈ ಸ್ಥಿತಿಯನ್ನು ಗಮನಿಸಿದ ಪತ್ನಿಯ ಮನಸ್ಸು ಕರಗಿದೆ.
ಓಡೋಡಿ ಬಂದು ಪತಿಯ ತಬ್ಬಿಕೊಂಡ ಪತ್ನಿ!
ಕೆಲಕಾಲ ಪತಿಯನ್ನೇ ನೋಡುತ್ತಿದ್ದ ಪತ್ನಿ, ಕೊನೆಗೆ ಕೈಯಲ್ಲಿದ್ದ ಪೆನ್ನನ್ನು ಕೆಳಗಿಟ್ಟು ಕುಳಿತಿದ್ದಲ್ಲಿಂದ ಎದ್ದು ಓಡೋಡಿ ಬಂದು ಪತಿಯನ್ನು ಬಿಗಿಯಾಗಿ ತಬ್ಬಿಕೊಂಡಿದ್ದಾಳೆ. ಈ ವೇಳೆ ಆಕೆ ಭಾವುಕಳಾಗಿ ಕಣ್ಣೀರಿಟ್ಟಿದ್ದಾಳೆ. ವಿಚ್ಛೇದನದ ಮೂಲಕ ದೂರವಾಗಬೇಕಿದ್ದ ದಂಪತಿ ಮತ್ತೆ ಒಂದಾಗಿರುವುದನ್ನು ಕಂಡು ಅಲ್ಲಿದ್ದವರೂ ಭಾವುಕರಾಗಿದ್ದಾರೆ.
ಈ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ ಎಂದು ವೈರಲ್ ಆಗಿರುವ ವಿಡಿಯೋದಲ್ಲಿ ಹೇಳಲಾಗುತ್ತಿದೆ. ಆದರೆ, ದಂಪತಿಯ ಹೆಸರು, ಊರು ಹಾಗೂ ವಿಚ್ಛೇದನಕ್ಕೆ ಮುಂದಾಗಲು ನಿಖರ ಕಾರಣವೇನು ಎಂಬ ಮಾಹಿತಿ ಬಹಿರಂಗವಾಗಿಲ್ಲ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಕೊನೆಯ ಕ್ಷಣದಲ್ಲಿ ಪತ್ನಿ ತೆಗೆದುಕೊಂಡ ನಿರ್ಧಾರ ಮತ್ತು ದಂಪತಿಯ ಭಾವನಾತ್ಮಕ ಕ್ಷಣಗಳು ನೆಟ್ಟಿಗರ ಗಮನ ಸೆಳೆದಿವೆ.






