
ಮುಂಡಗೋಡ: ಬಾಡಿಗೆ ಮನೆಯೊಂದರಲ್ಲಿ ಅಕ್ರಮವಾಗಿ ಕಾಡುಹಂದಿ ಮಾಂಸವನ್ನು ತುಂಡುಗಳಾಗಿ ವಿಂಗಡಿಸಿ ಅಡುಗೆ ತಯಾರಿಸುತ್ತಿದ್ದ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 35 ಕೆ.ಜಿ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ.
ಬಂಧಿತನನ್ನು ಬೆಂಗಳೂರಿನ ಮೂಲದ ಪ್ರಜ್ವಲ್ ಎಂದು ಗುರುತಿಸಲಾಗಿದ್ದು, ಪರಾರಿಯಾದ ಆರೋಪಿಯನ್ನು ಮುಂಡಗೋಡ ಪಟ್ಟಣದ ಗಾಂಧಿನಗರ ನಿವಾಸಿ ಸುರೇಶ ಕೊರವರ ಎಂದು ತಿಳಿದುಬಂದಿದೆ.
ಗಾಂಧಿನಗರದಲ್ಲಿರುವ ಸುರೇಶ ಕೊರವರ ಅವರ ಬಾಡಿಗೆ ಮನೆಯಲ್ಲಿ ಇಬ್ಬರೂ ಸೇರಿಕೊಂಡು ಕಾಡುಹಂದಿ ಮಾಂಸವನ್ನು ಪಾಲು ಮಾಡಿ ಅಡುಗೆ ತಯಾರಿಸುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ದಾಳಿ ನಡೆಸಿದ್ದಾರೆ. ಈ ವೇಳೆ ಅರಣ್ಯಾಧಿಕಾರಿಗಳನ್ನು ಕಂಡು ಓರ್ವ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಮತ್ತೋರ್ವನನ್ನು ವಶಕ್ಕೆ ಪಡೆಯಲಾಗಿದೆ. ಮನೆಯಲ್ಲಿದ್ದ ಸುಮಾರು 35 ಕೆ.ಜಿ ಕಾಡುಹಂದಿ ಮಾಂಸವನ್ನು ಜಪ್ತಿ ಮಾಡಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಅರಣ್ಯ ಮೊಕದ್ದಮೆ ದಾಖಲಿಸಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪರಾರಿಯಾಗಿರುವ ಮತ್ತೊಬ್ಬ ಆರೋಪಿಯ ಪತ್ತೆಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಮುಂಡಗೋಡ ಆರ್ಎಫ್ಒ ಅಪ್ಪಾರಾವ್ ಕಲಶೆಟ್ಟಿ, ಉಪ ವಲಯ ಅರಣ್ಯಾಧಿಕಾರಿಗಳಾದ ಅರ್ಜುನ ಮೊರಬ, ಸುನಿತಾ ಬಿ.ಎಂ., ಗಸ್ತು ಅರಣ್ಯ ಪಾಲಕರಾದ ಮುಸ್ತಾಕ್ ಅಲಿ ಒಂಟಿ, ಮುತ್ತುರಾಜ ಹಳ್ಳಿ, ಸಂತೋಷ ಜಲ್ಲೇರ, ರಾಘವೇಂದ್ರ ಅಮ್ಮಿನಬಾವಿ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.






