ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾದ ವ್ಯಕ್ತಿಯ ಪ್ರೀತಿಗೆ ಮರುಳಾಗಿ ತನ್ನ ಗಂಡ ಹಾಗೂ ಇಬ್ಬರು ಮಕ್ಕಳನ್ನು ತೊರೆದು ಮನೆ ಬಿಟ್ಟು ಹೋಗಿದ್ದ ಮಹಿಳೆಯೊಬ್ಬಳು, ಎರಡು ವರ್ಷಗಳ ಬಳಿಕ ಇದೀಗ ಭಾರೀ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾಳೆ. ಪ್ರೇಮಿಯೊಂದಿಗೆ ಹೊಸ ಜೀವನ ಆರಂಭಿಸಿದ್ದ ಆಕೆ, ಇದೀಗ ಅವನಿಂದಲೇ ದೈಹಿಕ ಮತ್ತು ಮಾನಸಿಕ ಹಿಂಸೆ ಅನುಭವಿಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದು ತನ್ನ ನೋವನ್ನು ಹಂಚಿಕೊಂಡಿದ್ದಾಳೆ.
ಮಹಿಳೆಯ ಹೇಳಿಕೆಯ ಪ್ರಕಾರ, ಆರಂಭದಲ್ಲಿ ಪ್ರೇಮಿ ತುಂಬಾ ಪ್ರೀತಿಯಿಂದ ನಡೆದುಕೊಂಡಿದ್ದ. ಆದರೆ ಕಾಲ ಕಳೆದಂತೆ ಅವನ ನಿಜಸ್ವರೂಪ ಹೊರಬಂದಿದ್ದು, ಪ್ರತಿದಿನ ಮದ್ಯಪಾನ ಮಾಡಿ ಬಂದು ಜಗಳವಾಡುವುದು, ಹಲ್ಲೆ ನಡೆಸುವುದು ಮತ್ತು ಅವಮಾನಿಸುವುದು ಸಾಮಾನ್ಯವಾಗಿಬಿಟ್ಟಿದೆ. ಅಲ್ಲದೆ, “ನಿನ್ನ ಗಂಡ ಮತ್ತು ಮಕ್ಕಳ ಬಳಿಗೆ ಹೋಗು” ಎಂದು ನಿರಂತರವಾಗಿ ಕಿರುಕುಳ ನೀಡುತ್ತಿದ್ದಾನೆ ಎಂದು ಆಕೆ ಆರೋಪಿಸಿದ್ದಾಳೆ.
