ಆಗ್ರಾ: ತಾಯಿ-ಮಗನ ಪವಿತ್ರ ಬಾಂಧವ್ಯವನ್ನೇ ಪ್ರಶ್ನಿಸುವಂತಹ ಬೆಚ್ಚಿಬೀಳಿಸುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ಬೆಳಕಿಗೆ ಬಂದಿದೆ. ತವರಿಗೆ ತೆರಳಿದ್ದ ಪತ್ನಿಯನ್ನು ಮರಳಿ ಮನೆಗೆ ಕರೆತರಬೇಕೆಂಬ ಆಸೆಯಿಂದ, ಅತ್ತೆಯ ಪ್ರಚೋದನೆಗೆ ಒಳಗಾದ ಮಗ ತನ್ನ ಹೆತ್ತ ತಾಯಿಗೆ ಊಟದಲ್ಲಿ ವಿಷ ಬೆರೆಸಿ ಕೊಲ್ಲಲು ಯತ್ನಿಸಿದ್ದಾನೆ. ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಅತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಆರೋಪಿ ರವೀಂದ್ರನ ಪತ್ನಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತನ್ನ ತವರೂರಾದ ಗತ್ಪುರಾ ಗ್ರಾಮದಲ್ಲಿ ವಾಸಿಸುತ್ತಿದ್ದಳು. ಪತ್ನಿಯನ್ನು ಮರಳಿ ಮನೆಗೆ ಕರೆತರಲು ರವೀಂದ್ರ ಹಲವು ಬಾರಿ ಪ್ರಯತ್ನಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದೇ ವೇಳೆ ಆತನ ಅತ್ತೆ ಫೂಲ್ವತಿ ಆಘಾತಕಾರಿ ಷರತ್ತೊಂದನ್ನು ವಿಧಿಸಿದ್ದಾಳೆ ಎನ್ನಲಾಗಿದೆ.
“ನಿನ್ನ ತಾಯಿ ಬದುಕಿರುವವರೆಗೆ ನನ್ನ ಮಗಳು ನಿನ್ನ ಮನೆಗೆ ಬರುವುದಿಲ್ಲ. ಅವಳನ್ನು ಮರಳಿ ಕರೆತರಬೇಕಾದರೆ ಮೊದಲು ನಿನ್ನ ತಾಯಿಯನ್ನು ಕೊಲ್ಲಬೇಕು” ಎಂದು ಫೂಲ್ವತಿ ಪ್ರಚೋದನೆ ನೀಡಿದ್ದಾಳೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಅತ್ತೆಯ ಮಾತಿಗೆ ಮರುಳಾದ ರವೀಂದ್ರ, ತನ್ನ ತಾಯಿಯನ್ನು ಹತ್ಯೆ ಮಾಡಲು ಸಂಚು ರೂಪಿಸಿ, ಆಹಾರದಲ್ಲಿ ವಿಷಕಾರಿ ಪದಾರ್ಥವನ್ನು ಬೆರೆಸಿ ತಿನ್ನಿಸಿದ್ದಾನೆ. ಊಟ ಮಾಡಿದ ಕೆಲವೇ ಹೊತ್ತಿನಲ್ಲಿ ತಾಯಿ ತೀವ್ರ ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ ಆರೋಪಿಯ ತಂದೆ ರಣವೀರ್ ಸಿಂಗ್ ಪೊಲೀಸರಿಗೆ ದೂರು ನೀಡಿದ್ದು, ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ರವೀಂದ್ರನನ್ನು ಬಂಧಿಸಿರುವ ಪೊಲೀಸರು, ಪ್ರಕರಣದ ಮತ್ತೊಬ್ಬ ಆರೋಪಿಯಾಗಿರುವ ಅತ್ತೆ ಫೂಲ್ವತಿಗಾಗಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
