ಬೆಂಗಳೂರು: ಖ್ಯಾತ ಸಾಹಿತಿ, ಪತ್ರಕರ್ತ ಹಾಗೂ ಚಲನಚಿತ್ರ ನಿರ್ದೇಶಕರಾದ ದಿವಂಗತ ಪಿ. ಲಂಕೇಶ್ ಅವರ ಪತ್ನಿ, ಹಿರಿಯ ಲೇಖಕಿ ಇಂದಿರಾ ಲಂಕೇಶ್ ಅವರು 84ನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕಳೆದ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.

ಇಂದಿರಾ ಲಂಕೇಶ್ ಅವರ ನಿಧನದ ಸುದ್ದಿ ಕನ್ನಡ ಸಾಹಿತ್ಯ, ಪತ್ರಿಕೋದ್ಯಮ ಹಾಗೂ ಸಾಂಸ್ಕೃತಿಕ ವಲಯದಲ್ಲಿ ದುಃಖದ ಛಾಯೆ ಮೂಡಿಸಿದೆ. ಅವರು ಕೇವಲ ಪಿ. ಲಂಕೇಶ್ ಅವರ ಜೀವನ ಸಂಗಾತಿಯಾಗಿರದೆ, ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮದೇ ಆದ ವಿಶಿಷ್ಟ ಗುರುತನ್ನು ಮೂಡಿಸಿಕೊಂಡಿದ್ದರು.

ಸಾಹಿತ್ಯ, ಪತ್ರಿಕೋದ್ಯಮ ಹಾಗೂ ಪುಸ್ತಕ ಪ್ರಕಟಣೆಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಇಂದಿರಾ ಲಂಕೇಶ್ ಅವರು ಅನೇಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.

ಅವರು ಪುತ್ರಿ ಕವಿತಾ ಲಂಕೇಶ್, ಪುತ್ರ ಇಂದ್ರಜಿತ್ ಲಂಕೇಶ್ ಸೇರಿದಂತೆ ಅಪಾರ ಬಂಧು-ಬಳಗ ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ. ಕನ್ನಡ ಸಾಹಿತ್ಯ, ಪತ್ರಿಕೋದ್ಯಮ ಮತ್ತು ಚಿತ್ರರಂಗದಲ್ಲಿ ಮಹತ್ವದ ಕೊಡುಗೆ ನೀಡಿರುವ ಲಂಕೇಶ್ ಕುಟುಂಬದ ಪ್ರಮುಖ ಸದಸ್ಯೆಯಾಗಿದ್ದ ಇಂದಿರಾ ಲಂಕೇಶ್ ಅವರ ಅಗಲಿಕೆ ಎಲ್ಲರಲ್ಲೂ ನೋವುಂಟು ಮಾಡಿದೆ.

ಇಂದಿರಾ ಲಂಕೇಶ್ ಅವರ ನಿಧನಕ್ಕೆ ಸಾಹಿತ್ಯಿಕರು, ಪತ್ರಕರ್ತರು, ರಾಜಕೀಯ ಮುಖಂಡರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ. ಕನ್ನಡ ಸಾಂಸ್ಕೃತಿಕ ಲೋಕವು ಮಹತ್ವದ ವ್ಯಕ್ತಿತ್ವವೊಂದನ್ನು ಕಳೆದುಕೊಂಡಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಿಎಂ ಡಿ.ಕೆ. ಶಿವಕುಮಾರ್ ಸಂತಾಪ

ಇಂದಿರಾ ಲಂಕೇಶ್ ಅವರ ನಿಧನಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ. “ಖ್ಯಾತ ಸಾಹಿತಿ ಮತ್ತು ಪತ್ರಕರ್ತರಾಗಿದ್ದ ಪಿ. ಲಂಕೇಶ್ ಅವರ ಸಾಹಿತ್ಯ, ಮಾಧ್ಯಮ ಹಾಗೂ ಚಿತ್ರರಂಗದ ಸಾಧನೆಗಳ ಹಿಂದೆ ಇಂದಿರಾ ಲಂಕೇಶ್ ಅವರ ಮಹತ್ವದ ಬೆಂಬಲವಿತ್ತು. ವ್ಯವಹಾರ, ಬರವಣಿಗೆ ಹಾಗೂ ಪುಸ್ತಕ ಪ್ರಕಟಣೆಯಲ್ಲೂ ಅವರು ಸಕ್ರಿಯರಾಗಿದ್ದರು. ಛಲ ಮತ್ತು ಧೈರ್ಯದ ಪ್ರತೀಕವಾಗಿದ್ದ ಇಂದಿರಾ ಲಂಕೇಶ್ ಅವರು ಎಲ್ಲ ಹೆಣ್ಣುಮಕ್ಕಳಿಗೂ ಮಾದರಿಯಾಗಿದ್ದರು. ಭಗವಂತರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಕುಟುಂಬಸ್ಥರು, ಆಪ್ತರು ಮತ್ತು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ” ಎಂದು ಅವರು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

Related News

error: Content is protected !!