ವಿಜಯಪುರ ಜಿಲ್ಲೆಯಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರಾಜು ಬಾಪು ಖರಿ (48) ಅವರನ್ನು ಸಿನಿಮಾದಂತೆಯೇ ಯೋಜಿತವಾಗಿ ಹತ್ಯೆಗೈದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಆರು ಆರೋಪಿಗಳನ್ನು ಬಂಧಿಸಿದ್ದಾರೆ.
ಏಪ್ರಿಲ್ 14ರಂದು ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಗುಗದಡ್ಡಿ ಗ್ರಾಮದ ನಿವಾಸಿ ರಾಜು ಖರಿ ಅವರು ತಮ್ಮ ಥಾರ್ ಜೀಪಿನಲ್ಲಿ ವಿಜಯಪುರದತ್ತ ಪ್ರಯಾಣಿಸುತ್ತಿದ್ದರು. ಈ ವೇಳೆ ಅಲಿಯಾಬಾದ್ ಕೈಗಾರಿಕಾ ಪ್ರದೇಶದ ಬಳಿ ಟಿಪ್ಪರ್ ಟ್ರಕ್ ಡಿಕ್ಕಿ ಹೊಡೆಸಲಾಗಿದೆ. ಡಿಕ್ಕಿಯ ತೀವ್ರತೆಗೆ ಜೀಪ್ ಮುಂಭಾಗ ಸಂಪೂರ್ಣ ಜಖಂ ಆಗಿದ್ದರೂ, ರಾಜು ಬದುಕುಳಿದಿದ್ದರು.
ಆದರೆ, ಅಪಘಾತದ ನಂತರ ಸ್ಥಳಕ್ಕೆ ಧಾವಿಸಿದ ಹಂತಕರು ಜೀಪ್ ಡೋರ್ನ್ನು ದೊಡ್ಡ ಕಲ್ಲಿನಿಂದ ಒಡೆದು, ರಾಜು ಅವರ ತಲೆ ಹಾಗೂ ಎದೆ ಭಾಗಕ್ಕೆ ಕಂಟ್ರಿ ಪಿಸ್ತೂಲ್ ಬಳಸಿ ಆರು ಸುತ್ತು ಗುಂಡು ಹಾರಿಸಿದ್ದಾರೆ. ಪರಿಣಾಮವಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆ ಸಂಬಂಧ ಮೃತನ ಸಹೋದರ ನೀಡಿದ ದೂರಿನ ಆಧಾರದಲ್ಲಿ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೊಲೆ, ಮಾರಕಾಯುಧ ಬಳಕೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಗಂಭೀರತೆಯನ್ನು ಗಮನಿಸಿದ ಪೊಲೀಸರು ಎರಡು ವಿಶೇಷ ತಂಡಗಳನ್ನು ರಚಿಸಿ ತನಿಖೆ ನಡೆಸಿ, ಅಬುಶ್ಯಾ ಕೊಡ್ಲೇಕರ್ (36), ಅಬಾಶ್ಯಾ ಮಾನೆ (35), ವಾಗೀಶ್ (31), ಜಲಿಂದರ್ (29), ಅಜಿತ್ (29) ಮತ್ತು ಮುರಗು (24) ಸೇರಿದಂತೆ ಆರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.
ತನಿಖೆಯಲ್ಲಿ, ಪ್ರಮುಖ ಆರೋಪಿ ಅಬುಶ್ಯಾ ಕೊಡ್ಲೇಕರ್ ಮತ್ತು ರಾಜು ಖರಿ ನಡುವೆ ಇದ್ದ ಆಸ್ತಿ ವಿವಾದವೇ ಹತ್ಯೆಗೆ ಕಾರಣವಾಗಿದ್ದು, ಕೊಲೆಗೆ ಎರಡು ದಿನಗಳ ಮೊದಲು ಟಿಪ್ಪರ್ ಟ್ರಕ್ ಖರೀದಿಸಿ ಸಂಚು ರೂಪಿಸಲಾಗಿತ್ತು ಎಂಬುದು ಬೆಳಕಿಗೆ ಬಂದಿದೆ.
