ಮಧ್ಯಪ್ರದೇಶದ ಕಟ್ಟಿ ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಶಿಕ್ಷಕ ವಿದ್ಯಾರ್ಥಿಗಳಿಗೆ ಮದ್ಯ ನೀಡಿದ ಆರೋಪದ ಮೇಲೆ ಅಮಾನತುಗೊಂಡಿದ್ದಾರೆ. ಈ ಸಂಬಂಧದ ವಿಡಿಯೋವೊಂದು ವೈರಲ್ ಆದ ಬಳಿಕ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡಿದ್ದಾರೆ.

ಬರ್ವಾರಾ ಬ್ಲಾಕ್‌ನ ಖಿರ್ಹಾನಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಲಾಲ್ ನವೀನ್ ಪ್ರತಾಪ್ ಸಿಂಗ್ ಎಂಬ ಶಿಕ್ಷಕನನ್ನು ಗುರುತಿಸಲಾಗಿದೆ. ಇತ್ತೀಚೆಗೆ ಹರಿದಾಡಿದ ಒಂದು ವಿಡಿಯೋದಲ್ಲಿ, ಅವರು ಶಾಲಾ ವಿದ್ಯಾರ್ಥಿಗಳಿಗೆ ಕಪ್‌ಗಳಲ್ಲಿ ಪಾನೀಯವನ್ನು ನೀಡುತ್ತಿರುವ ದೃಶ್ಯಗಳು ದಾಖಲೆಯಾಗಿವೆ. ಈ ಪಾನೀಯ ಮದ್ಯವಾಗಿರಬಹುದು ಎಂಬ ಶಂಕೆಯ ಹಿನ್ನೆಲೆಯಲ್ಲಿ ವಿವಾದ ಉದ್ಭವಿಸಿದೆ.

ಜಿಲ್ಲಾಧಿಕಾರಿ ದಿಲೀಪ್ ಕುಮಾರ್ ಯಾದವ್ ಈ ಘಟನೆಗೆ ಗಂಭೀರವಾಗಿ ಪ್ರತಿಕ್ರಿಯಿಸಿ, ಸಂಬಂಧಿತ ಶಾಲಾ ಶಿಕ್ಷಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಶಿಕ್ಷಣಾಧಿಕಾರಿ ಒಪಿ ಸಿಂಗ್ ಅವರಿಗೆ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ, ಶಿಕ್ಷಕ ಸಿಂಗ್ ಅವರನ್ನು ಮಧ್ಯಪ್ರದೇಶ ನಾಗರಿಕ ಸೇವಾ ನಡವಳಿಕೆ ನಿಯಮಗಳಡಿ ತಕ್ಷಣ ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ವೈರಲ್ ವಿಡಿಯೋದಲ್ಲಿ, ವಿದ್ಯಾರ್ಥಿಗಳ ಸಮೀಪ ಕುಳಿತುಕೊಂಡಿದ್ದ ವ್ಯಕ್ತಿಯೊಬ್ಬನು ಮದ್ಯದಂತೆಯೇ ಕಾಣುವ ದ್ರವ್ಯವೊಂದನ್ನು ಪ್ಲಾಸ್ಟಿಕ್ ಕಪ್‌ಗಳಲ್ಲಿ ಪುಟ್ಟ ಮಕ್ಕಳಿಗೆ ನೀಡುತ್ತಿರುವುದು ಮತ್ತು “ಎಣ್ಣೆ ಹೊಡೆಯುವುದರಲ್ಲಿ ಏನು ತಪ್ಪಿಲ್ಲ” ಎಂಬ ಮಾತುಗಳನ್ನು ಹೇಳುತ್ತಿರುವುದು ಕೇಳಿಸಿತು. ಈ ದೃಶ್ಯಗಳು ಜನತೆಯಲ್ಲಿ ಆಕ್ರೋಶ ಉಂಟುಮಾಡಿದ್ದು, ಶಿಕ್ಷಕರ ನೈತಿಕ ಬದ್ಧತೆ ಹಾಗೂ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದ ಭಾರೀ ಚರ್ಚೆಗೆ ಕಾರಣವಾಗಿವೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ, ಇತರ ಬ್ಲಾಕ್‌ಗಳ ಅಧಿಕಾರಿಗಳಿಗೂ ವಿಡಿಯೋವನ್ನು ಶೇರ್ ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿದೆ. ಶಾಲಾ ಪರಿಸರದಲ್ಲಿ ಇಂತಹ ದುಷ್ಪ್ರವೃತ್ತಿ ನಡೆದು ಹೋಗಿರುವುದು ಶಿಕ್ಷಕರ ಘನತೆಗೆ ಮಸಿ ಬಳಕುವಂತ ಘಟನೆ ಎಂದು ಸ್ಥಳೀಯರು ಪ್ರತಿಕ್ರಿಯಿಸಿದ್ದಾರೆ.

ಇದರಿಂದಾಗಿ ಶಾಲಾ ಮಕ್ಕಳ ಮೇಲಿನ ಭದ್ರತೆ ಮತ್ತು ಶಿಕ್ಷಕರ ನಡವಳಿಕೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಮುಂದಿನ ದಿನಗಳಲ್ಲಿ ನಿರ್ವಹಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

error: Content is protected !!