ರಾಂಚಿ: ಜೈಲಿನೊಳಗೆ ಮಹಿಳಾ ಕೈದಿಯೊಬ್ಬರು ಗರ್ಭಿಣಿಯಾಗಿರುವ ಆಘಾತಕಾರಿ ಘಟನೆ ಜಾರ್ಖಂಡ್‌ನ ಹೋಟ್‌ವಾರ್ ಕೇಂದ್ರ ಕಾರಾಗೃಹದಲ್ಲಿ ಬೆಳಕಿಗೆ ಬಂದಿದೆ. ಶಿಕ್ಷೆ ಅನುಭವಿಸುತ್ತಿದ್ದ ಮಹಿಳಾ ಕೈದಿಯೊಬ್ಬರು ಗರ್ಭಿಣಿಯಾಗಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದ್ದು, ಜೈಲಿನ ಭದ್ರತಾ ವ್ಯವಸ್ಥೆಯ ಬಗ್ಗೆ ಹಲವು ಗಂಭೀರ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಹೋಟ್‌ವಾರ್ ಕೇಂದ್ರ ಕಾರಾಗೃಹದಲ್ಲಿ ವಿವಿಧ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಶಿಕ್ಷೆ ಅನುಭವಿಸುತ್ತಿದ್ದ ಮಹಿಳಾ ಕೈದಿಯೊಬ್ಬರಿಗೆ ಇತ್ತೀಚೆಗೆ ಆರೋಗ್ಯದಲ್ಲಿ ಏರುಪೇರಾಗಿದೆ. ಈ ಹಿನ್ನೆಲೆಯಲ್ಲಿ ಜೈಲು ವೈದ್ಯಕೀಯ ಸಿಬ್ಬಂದಿ ಆಕೆಯನ್ನು ತಪಾಸಣೆಗೆ ಒಳಪಡಿಸಿದಾಗ ಗರ್ಭಿಣಿಯಾಗಿರುವುದು ದೃಢಪಟ್ಟಿದೆ. ಈ ವಿಷಯ ತಿಳಿಯುತ್ತಿದ್ದಂತೆ ಜೈಲು ಅಧಿಕಾರಿಗಳು ಹಾಗೂ ಸಿಬ್ಬಂದಿ ಅಚ್ಚರಿಗೊಳಗಾಗಿದ್ದಾರೆ.

ಜೈಲು ಭದ್ರತಾ ವ್ಯವಸ್ಥೆಯ ಬಗ್ಗೆ ಅನುಮಾನ!

ಸಾಮಾನ್ಯವಾಗಿ ಪುರುಷ ಮತ್ತು ಮಹಿಳಾ ಕೈದಿಗಳನ್ನು ಪ್ರತ್ಯೇಕ ವಿಭಾಗಗಳಲ್ಲಿ ಇರಿಸಿ ಕಟ್ಟುನಿಟ್ಟಿನ ಭದ್ರತೆ ಒದಗಿಸಲಾಗುತ್ತದೆ. ಇಂತಹ ವ್ಯವಸ್ಥೆಯ ನಡುವೆಯೂ ಮಹಿಳಾ ಕೈದಿಯೊಬ್ಬರು ಗರ್ಭಿಣಿಯಾಗಿರುವುದು ಹೇಗೆ ಎಂಬ ಪ್ರಶ್ನೆ ಇದೀಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಜೈಲಿನೊಳಗೆ ಈ ಘಟನೆ ನಡೆದಿದೆಯೇ ಅಥವಾ ಜೈಲಿಗೆ ಬರುವುದಕ್ಕೂ ಮುನ್ನವೇ ಮಹಿಳೆ ಗರ್ಭಿಣಿಯಾಗಿದ್ದರೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಘಟನೆಯ ಹಿನ್ನೆಲೆ ತಿಳಿದುಕೊಳ್ಳಲು ಜೈಲು ಆಡಳಿತ ಮಂಡಳಿ ಆಂತರಿಕ ತನಿಖೆಗೆ ಮುಂದಾಗಿದೆ ಎನ್ನಲಾಗಿದೆ. ಭದ್ರತಾ ಲೋಪವಾಗಿದೆಯೇ, ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ನಡೆದಿದೆಯೇ ಎಂಬ ಅಂಶಗಳ ಬಗ್ಗೆಯೂ ಪರಿಶೀಲನೆ ನಡೆಯುವ ಸಾಧ್ಯತೆಯಿದೆ.

ಜೈಲಿನಂತಹ ಕಟ್ಟುನಿಟ್ಟಿನ ಭದ್ರತೆಯ ಸ್ಥಳದಲ್ಲಿ ಇಂತಹ ಬೆಳವಣಿಗೆ ಸಂಭವಿಸಿರುವುದು ಜಾರ್ಖಂಡ್‌ನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ತನಿಖೆಯ ಬಳಿಕವಷ್ಟೇ ಘಟನೆಯ ಸಂಪೂರ್ಣ ಸತ್ಯಾಂಶ ಹೊರಬರಬೇಕಿದೆ.

Related News

error: Content is protected !!