
ತಮಿಳುನಾಡು: ಮೂವರು ಮಕ್ಕಳ ತಾಯಿಯಾಗಿದ್ದ 24 ವರ್ಷದ ಮಹಿಳೆಯೊಬ್ಬರನ್ನು ಪ್ರಿಯಕರನೇ ಹ*ತ್ಯೆ ಮಾಡಿರುವ ಆಘಾತಕಾರಿ ಘಟನೆ ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಊತ್ತೂಕೋಟೆ ಸಮೀಪದ ಅರಣ್ಯ ಪ್ರದೇಶದಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮೂಲದ 28 ವರ್ಷದ ದುರ್ಗಾ ಪ್ರಸಾದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಪತಿಯಿಂದ ದೂರವಾಗಿ ಮಕ್ಕಳೊಂದಿಗೆ ವಾಸವಿದ್ದ ಮಹಿಳೆ!
ಹತ್ಯೆಯಾದ ಮಹಿಳೆಯನ್ನು ಮಣಿಮೇಖಲಾ (24) ಎಂದು ಗುರುತಿಸಲಾಗಿದೆ. ವಿವಾಹಿತೆಯಾಗಿದ್ದ ಮಣಿಮೇಖಲಾ ಅವರಿಗೆ ಮೂವರು ಮಕ್ಕಳಿದ್ದಾರೆ. ದಾಂಪತ್ಯ ಜೀವನದಲ್ಲಿ ಉಂಟಾದ ಮನಸ್ತಾಪದ ಹಿನ್ನೆಲೆಯಲ್ಲಿ ಪತಿಯಿಂದ ದೂರವಾಗಿದ್ದ ಅವರು, ತಿರುವಳ್ಳೂರು ಜಿಲ್ಲೆಯ ಸೆಂಗರೈ ಗ್ರಾಮದ ತವರು ಮನೆಯಲ್ಲಿ ಮಕ್ಕಳೊಂದಿಗೆ ವಾಸವಾಗಿದ್ದರು.
ಈ ನಡುವೆ ತೇರ್ವಾಯ್ ಕಂಡಿಗೈ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಆಂಧ್ರಪ್ರದೇಶ ಮೂಲದ ದುರ್ಗಾ ಪ್ರಸಾದ್ ಪರಿಚಯವಾಗಿದ್ದ. ಬಳಿಕ ಇಬ್ಬರ ನಡುವೆ ಆತ್ಮೀಯತೆ ಬೆಳೆದು ಪ್ರೇಮ ಸಂಬಂಧಕ್ಕೆ ತಿರುಗಿತ್ತು ಎನ್ನಲಾಗಿದೆ.
ಹಣಕಾಸಿನ ವಿಚಾರಕ್ಕೆ ಶುರುವಾದ ಜಗಳವೇ ಕೊಲೆಗೆ ಕಾರಣ?
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಇಬ್ಬರ ನಡುವೆ ಹಣಕಾಸಿನ ವಿಚಾರವಾಗಿ ಆಗಾಗ್ಗೆ ಜಗಳ ನಡೆಯುತ್ತಿತ್ತು. ಇದೇ ವಿಚಾರವಾಗಿ ಇತ್ತೀಚೆಗೆ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿತ್ತು ಎನ್ನಲಾಗಿದೆ.
ಸಮಸ್ಯೆಯನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳೋಣ ಎಂದು ಹೇಳಿದ ದುರ್ಗಾ ಪ್ರಸಾದ್, ಮಣಿಮೇಖಲಾ ಅವರನ್ನು ದ್ವಿಚಕ್ರ ವಾಹನದಲ್ಲಿ ಪೂಂಡಿ ಸಮೀಪದ ಸೆಂದ್ರಾಯನ್ಪಾಳಯಂ ಅರಣ್ಯ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ಮತ್ತೆ ಇಬ್ಬರ ನಡುವೆ ಜಗಳವಾಗಿದ್ದು, ಈ ವೇಳೆ ಮಣಿಮೇಖಲಾ ಅವರನ್ನು ಹತ್ಯೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಅರಣ್ಯದಲ್ಲಿ ಶವ ಪತ್ತೆ; ಪ್ರಿಯಕರನ ಬಂಧನ!
ಮಹಿಳೆಯ ಹತ್ಯೆಯ ಮಾಹಿತಿ ತಿಳಿದ ಪೆನ್ನಲೂರುಪೇಟೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಳಿಕ ತನಿಖೆ ಕೈಗೊಂಡ ಪೊಲೀಸರು ದುರ್ಗಾ ಪ್ರಸಾದ್‌ನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಹಣಕಾಸಿನ ವಿಚಾರ ಹಾಗೂ ವೈಯಕ್ತಿಕ ಮನಸ್ತಾಪವೇ ಹತ್ಯೆಗೆ ಕಾರಣ ಎಂದು ಆರೋಪಿ ಹೇಳಿರುವುದಾಗಿ ತಿಳಿದುಬಂದಿದೆ.
ಮೂವರು ಮಕ್ಕಳ ತಾಯಿಯ ದಾರುಣ ಅಂತ್ಯದಿಂದ ಕುಟುಂಬಸ್ಥರು ಕಣ್ಣೀರಿನಲ್ಲಿ ಮುಳುಗಿದ್ದಾರೆ. ಪ್ರಕರಣದ ಹಿಂದಿರುವ ಸಂಪೂರ್ಣ ಹಿನ್ನೆಲೆ ಹಾಗೂ ಇತರ ಆಯಾಮಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.






