₹6.34 ಲಕ್ಷ ಮೌಲ್ಯದ ಚಿನ್ನಾಭರಣ ವಶ; ಕೃತ್ಯಕ್ಕೆ ಬಳಸಿದ್ದ ಬೈಕ್ ಜಪ್ತಿ
ಸಿದ್ದಾಪುರ: ತಾಲೂಕಿನ ಹೆಜನಿ ಗ್ರಾಮದ ಬರೆಗುಡ್ಡೆಯಲ್ಲಿ ನಡೆದ ಮನೆಕಳ್ಳತನ ಪ್ರಕರಣವನ್ನು ಸಿದ್ದಾಪುರ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ₹6.34 ಲಕ್ಷ ಮೌಲ್ಯದ 56 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್‌ನ್ನು ವಶಪಡಿಸಿಕೊಳ್ಳಲಾಗಿದೆ.
ಹೆಜನಿ ಗ್ರಾಮದ ನಿವಾಸಿ ನೀಲಕಂಠ ಕನ್ನ ನಾಯ್ಕ (39) ಅವರ ಮನೆಯಲ್ಲಿ ಅಕ್ಟೋಬರ್ 28ರಂದು ಮಧ್ಯಾಹ್ನ 2ರಿಂದ 2.30ರ ನಡುವೆ ಕಳ್ಳತನ ನಡೆದಿತ್ತು. ಹಳದಿ ಬಣ್ಣದ ಬೈಕ್‌ನಲ್ಲಿ ಬಂದಿದ್ದ ಮೂವರು ಆರೋಪಿಗಳು ಮನೆಯ ಹಿಂಭಾಗದ ಗೋಡೆ ಹತ್ತಿ ಒಳನುಗ್ಗಿ, ಹಾಲ್‌ನಲ್ಲಿದ್ದ ಗೋದ್ರೇಜ್ ಕಪಾಟನ್ನು ಮೀಟಿ ತೆರೆದಿದ್ದರು. ಬಳಿಕ ಅದರೊಳಗಿದ್ದ ಸೇಫ್ ಲಾಕರ್‌ನ ಚಾವಿ ಬಳಸಿ ಲಾಕರ್ ತೆರೆದು 35 ಗ್ರಾಂ ತೂಕದ ಬಂಗಾರದ ತಾಳಿ ಸರ, 16 ಗ್ರಾಂ ಬಂಗಾರದ ಸರ, 5 ಗ್ರಾಂ ತೂಕದ ಕಿವಿಯೋಲೆಗಳ ಲಾಕೆಟ್ ಹಾಗೂ ₹4 ಸಾವಿರ ನಗದು ಕಳವು ಮಾಡಿಕೊಂಡು ಪರಾರಿಯಾಗಿದ್ದರು.
ಈ ಕುರಿತು ನೀಲಕಂಠ ನಾಯ್ಕ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ. ಹಾಗೂ ಶಿರಸಿ ಉಪವಿಭಾಗದ ಡಿವೈಎಸ್ಪಿ ಗೀತಾ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಜೆ.ಬಿ. ಸೀತಾರಾಮ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ತನಿಖೆ ನಡೆಸಿದ ಪೊಲೀಸರು ಭದ್ರಾವತಿ ತಾಲೂಕಿನ ಹಂಚಿನ ಸಿದ್ದಾಪುರದ ಸಿದ್ದಲಿಂಗ ಎನ್. (29), ಕಿರಣ (26) ಹಾಗೂ ವಿಜಯ ಎನ್. (30) ಎಂಬುವವರನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಅವರಿಂದ ಕಳವು ಮಾಡಿದ್ದ 56 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಕೃತ್ಯಕ್ಕೆ ಬಳಸಿದ್ದ ಅಂದಾಜು ₹20 ಸಾವಿರ ಮೌಲ್ಯದ ಬಜಾಜ್ ಅಪಾಚೆ ಬೈಕ್‌ನ್ನೂ ಜಪ್ತಿ ಮಾಡಲಾಗಿದೆ.
ಬಂಧಿತರು ರೂಢಿಗತ ಅಪರಾಧಿಗಳಾಗಿದ್ದು, ಕೊಡಗು, ಶಿವಮೊಗ್ಗ, ಉಡುಪಿ, ದಾವಣಗೆರೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಡೆದಿರುವ ಹಲವು ಮನೆಕಳ್ಳತನ ಪ್ರಕರಣಗಳಲ್ಲಿಯೂ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ವಿವಿಧ ಜಿಲ್ಲೆಗಳಲ್ಲಿ ನಡೆದಿರುವ ಇತರ ಕಳ್ಳತನ ಪ್ರಕರಣಗಳಲ್ಲಿ ಅವರ ಪಾತ್ರದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಪ್ರಕ್ರಿಯೆ ನಡೆಸಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.
ಕೌಟುಂಬಿಕ ಕಲಹಕ್ಕೆ ಏಳು ಜೀವಗಳ ಬಲಿ; ಕ್ಯಾಬ್ ಚಾಲಕ ಇಂದುಶೇಖರ್ ಬಂಧನ, ವಿಚಾರಣೆಯಲ್ಲಿ ಬಯಲಾಯ್ತು ನರಮೇಧದ ರಹಸ್ಯ ಬೆಂಗಳೂರು: ಸಿಲಿಕಾನ್…
ಪ್ರಕರಣದಲ್ಲಿ ಬಂಧಿತರ ಸಂಖ್ಯೆ 13ಕ್ಕೆ ಏರಿಕೆ; ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕೈವಾಡದ ಶಂಕೆ ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್‌ಗೆ…
ಅಂಗಡಿಗಳು, ನಂದಿನಿ ಬೂತ್, ಪಾರ್ಲರ್‌ಗಳೇ ಕಳ್ಳರ ಟಾರ್ಗೆಟ್ – ರಾತ್ರಿ ಗಸ್ತು ಹೆಚ್ಚಿಸಲು ಸ್ಥಳೀಯರ ಆಗ್ರಹ ಗೌರಿಬಿದನೂರು: ನಗರದ ಪ್ರಶಾಂತ್…
ಡಿಪಿಆರ್ ಸ್ಥಗಿತಕ್ಕೆ ಕರ್ನಾಟಕ ಸರ್ಕಾರಕ್ಕಷ್ಟೇ ಅಧಿಕಾರ: NWDA ಸ್ಪಷ್ಟನೆ | ಯೋಜನೆ ಮುಂದುವರಿಕೆ ಅಥವಾ ರದ್ದತಿಗೆ ಸರ್ಕಾರದ ನಿರ್ಧಾರವೇ ಅಂತಿಮ…
ತೆಲಂಗಾಣ: ಕೇವಲ ₹10 ಚಿಲ್ಲರೆ ಹಣದ ವಿಚಾರಕ್ಕೆ ಆರಂಭವಾದ ಜಗಳವೊಂದು ಕೊನೆಗೆ ಮಹಿಳಾ ಕಂಡಕ್ಟರ್‌ನ ಪ್ರಾಣವನ್ನೇ ಬಲಿ ಪಡೆದಿರುವ ಆಘಾತಕಾರಿ…
ಭಟ್ಕಳ:ಮಹಿಳೆಯೊಬ್ಬರಿಗೆ ಕಿರುಕುಳ ನೀಡಿ, ಅವರ ಖಾಸಗಿ ವಿಡಿಯೋಗಳನ್ನು ಚಿತ್ರೀಕರಿಸಿ ದುರುಪಯೋಗಪಡಿಸಿಕೊಂಡ ಪ್ರಕರಣದಲ್ಲಿ ಆರೋಪಿಗೆ ನ್ಯಾಯಾಲಯ ಆರು ತಿಂಗಳ ಜೈಲು ಶಿಕ್ಷೆ…