ಛತ್ತರ್‌ಪುರದಲ್ಲಿ ಗುರುವಾರ ನಡೆದ ಒಂದು ಅಚ್ಚರಿಯ ಘಟನೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಚಲಿಸುತ್ತಿದ್ದ ಆಂಬ್ಯುಲೆನ್ಸ್‌ನೊಳಗೆ ಯುವತಿ ಹಾಗೂ ಇಬ್ಬರು ಯುವಕರು ಆಕ್ಷೇಪಾರ್ಹ ಚಟುವಟಿಕೆಗಳಲ್ಲಿ ತೊಡಗಿದ್ದರೆಂಬ ಆರೋಪ ಹೊರಬಂದಿದೆ.

ದಾರಿಯಲ್ಲಿ ಸಾಗುತ್ತಿದ್ದ ವ್ಯಕ್ತಿಯೊಬ್ಬರು ಆಂಬ್ಯುಲೆನ್ಸ್ ಒಳಗಿನ ಅನುಮಾನಾಸ್ಪದ ಚಲನವಲನವನ್ನು ಗಮನಿಸಿ, ಕಿಟಕಿಯ ಮೂಲಕ ಒಳಗೆ ನೋಡಿದಾಗ ಈ ಸಂಗತಿ ಬಹಿರಂಗವಾಗಿದೆ. ಬಳಿಕ ಆತ ಆಂಬ್ಯುಲೆನ್ಸ್‌ನ್ನು ಹಿಂಬಾಲಿಸಿ ನಿಲ್ಲಿಸಲು ಯತ್ನಿಸಿದ ದೃಶ್ಯಗಳು ವಿಡಿಯೋದಲ್ಲಿ ದಾಖಲಾಗಿವೆ.

ವಿಡಿಯೋದಲ್ಲಿ, ಆತ ಇನ್ನೊಂದು ಕಾರಿನಲ್ಲಿದ್ದವರಿಂದ ಸಹಾಯ ಕೋರಿ, ವಾಹನವನ್ನು ತಡೆಯಲು ಮನವಿ ಮಾಡುತ್ತಿರುವುದು ಕಾಣಿಸುತ್ತದೆ. ಕೊನೆಗೆ ವಾಹನವನ್ನು ನಿಲ್ಲಿಸಿದಾಗ, ಒಳಗೆ ಒಬ್ಬ ಯುವತಿ ಮತ್ತು ಇಬ್ಬರು ಯುವಕರು ಇದ್ದರು. ಚಾಲಕನನ್ನು ಪ್ರಶ್ನಿಸಿದಾಗ “ಆಕೆ ನಮ್ಮ ಸಹೋದರಿ” ಎಂದು ಹೇಳಿದರೂ, ವೇಗವಾಗಿ ವಾಹನ ಚಲಾಯಿಸಿದ್ದಕ್ಕೆ ಸಮರ್ಪಕ ಉತ್ತರ ನೀಡಲು ಸಾಧ್ಯವಾಗಲಿಲ್ಲ.

ಈ ಘಟನೆ ಗಮನಿಸಿದ ಸಾರ್ವಜನಿಕರು ಸುಮಾರು 5 ಕಿಲೋಮೀಟರ್‌ಗಳವರೆಗೆ ಆಂಬ್ಯುಲೆನ್ಸ್ ಅನ್ನು ಬೆನ್ನಟ್ಟಿದ್ದು, ಬಳಿಕ ಅದನ್ನು ತಡೆದಿದ್ದಾರೆ.

ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ತುರ್ತು ವೈದ್ಯಕೀಯ ಸೇವೆಗೆ ಬಳಸುವ ಆಂಬ್ಯುಲೆನ್ಸ್‌ನ್ನು ಇಂತಹ ರೀತಿಯಲ್ಲಿ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬುದು ಜನರಲ್ಲಿ ಆಶ್ಚರ್ಯ ಹುಟ್ಟಿಸಿದೆ. ಕೆಲವರು ಇದನ್ನು ‘ಮೂವಿಂಗ್ ಓಯೋ’ ಎಂದು ವ್ಯಂಗ್ಯವಾಗಿ ಕರೆದಿದ್ದಾರೆ.

ಈ ಕುರಿತು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದು, ಪ್ರಕರಣದ ತನಿಖೆ ನಡೆಯುವ ಸಾಧ್ಯತೆಯಿದೆ. ತುರ್ತು ವಾಹನಗಳ ದುರ್ಬಳಕೆ ತಡೆಯಲು ಸೂಕ್ತ ನಿಯಂತ್ರಣ ಮತ್ತು ಮೇಲ್ವಿಚಾರಣೆ ಅಗತ್ಯವಿದೆ ಎಂಬ ಚರ್ಚೆಯೂ ಈ ಘಟನೆ ಬಳಿಕ ಹೆಚ್ಚಾಗಿದೆ.

error: Content is protected !!