ತುಮಕೂರು ತಾಲೂಕಿನ ಬೆಳಗುಂಬ ರಸ್ತೆಯಲ್ಲಿರುವ ಗರುಡ ಕೆಫೆ ಸಮೀಪ ರೌಡಿಶೀಟರ್‌ವೊಬ್ಬನನ್ನು ದುಷ್ಕರ್ಮಿಗಳು ಸಿನಿಮೀಯ ರೀತಿಯಲ್ಲಿ ಹತ್ಯೆಗೈದ ಘಟನೆ ಸೋಮವಾರ ಆತಂಕ ಸೃಷ್ಟಿಸಿದೆ. ಘಟನೆಯಿಂದ ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಮೃತನನ್ನು ಬೆಳಗುಂಬ ನಿವಾಸಿ ಮಲ್ಲ (38) ಎಂದು ಗುರುತಿಸಲಾಗಿದೆ. ಬೈಕ್‌ನಲ್ಲಿ ತೆರಳುತ್ತಿದ್ದ ಮಲ್ಲನನ್ನು ಸ್ವಿಫ್ಟ್ ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದು ಕೆಳಗೆ ಬೀಳಿಸಿದ್ದಾರೆ. ಬಳಿಕ ಮಾರಕಾಸ್ತ್ರಗಳೊಂದಿಗೆ ದಾಳಿ ನಡೆಸಿ, ಮುಖ ಹಾಗೂ ದೇಹವನ್ನು ಗುರುತಿಸಲಾಗದಷ್ಟು ಭೀಕರವಾಗಿ ಕೊಚ್ಚಿ ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಮಲ್ಲ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ರೌಡಿಶೀಟರ್ ಪಟ್ಟಿಯಲ್ಲಿದ್ದನು. 2008ರಲ್ಲಿ ವಡ್ಡರಹಳ್ಳಿ ಕ್ರಾಸ್ ಬಳಿ ನಡೆದಿದ್ದ ಕುಖ್ಯಾತ ‘ಗಡ್ಡ ರಾಜು’ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಹಿನ್ನೆಲೆ, ಆತನ ವಿರುದ್ಧ ಪೊಲೀಸರು ರೌಡಿಪಟ್ಟಿ ತೆರೆದು ನಿರಂತರ ನಿಗಾ ವಹಿಸುತ್ತಿದ್ದರು.

ಪ್ರಾಥಮಿಕ ತನಿಖೆಯಲ್ಲಿ ಹಳೆಯ ವೈಷಮ್ಯ ಅಥವಾ ಗ್ಯಾಂಗ್‌ವಾರ್‌ ಈ ಹತ್ಯೆಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಘಟನೆ ಕುರಿತು ಮಾಹಿತಿ ದೊರೆಯುತ್ತಿದ್ದಂತೆಯೇ ಕ್ಯಾತ್ಸಂದ್ರ ಹಾಗೂ ತುಮಕೂರು ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಪರಾರಿಯಾಗಿರುವ ಆರೋಪಿಗಳ ಪತ್ತೆ ಮತ್ತು ಬಂಧನಕ್ಕೆ ಪೊಲೀಸರು ವ್ಯಾಪಕ ಶೋಧ ಕಾರ್ಯ ಆರಂಭಿಸಿದ್ದಾರೆ.

Related News

error: Content is protected !!