
ಬೆಂಗಳೂರು: ಕುಂಬಳಗೋಡು ಠಾಣೆ ವ್ಯಾಪ್ತಿಯ ಗೇರುಪಾಳ್ಯದಲ್ಲಿ ಜುಲೈ 25ರಂದು ನಡೆದ ರೀಮಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಧೀರಜ್ ಕುಮಾರ್ (24) ವಿಚಾರಣೆಯ ವೇಳೆ ನೀಡಿರುವ ಹೇಳಿಕೆಯಲ್ಲಿ ಹಲವು ಅಚ್ಚರಿಯ ಸಂಗತಿಗಳು ಬೆಳಕಿಗೆ ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಬಿಹಾರ ಮೂಲದ ಧೀರಜ್ ಕುಮಾರ್ ಮತ್ತು ರೀಮಾ ಪರಸ್ಪರ ಪ್ರೀತಿಸಿ ಸುಮಾರು ಹತ್ತು ತಿಂಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದರು. ಆರಂಭದಲ್ಲಿ ದಾಂಪತ್ಯ ಜೀವನ ಸುಗಮವಾಗಿದ್ದರೂ, ಬಳಿಕ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚಾಗಿದ್ದವು ಎನ್ನಲಾಗಿದೆ.
ವಿಚಾರಣೆಯಲ್ಲಿ ಆರೋಪಿ, ಪತ್ನಿ ಹೆಚ್ಚಿನ ಸಮಯವನ್ನು ಮೊಬೈಲ್‌ನಲ್ಲಿ ರೀಲ್ಸ್ ಮಾಡುವುದರಲ್ಲಿ ಕಳೆಯುತ್ತಿದ್ದರು. ಮನೆ ಕೆಲಸ ಹಾಗೂ ದಾಂಪತ್ಯ ಜೀವನದ ಕಡೆ ನಿರ್ಲಕ್ಷ್ಯ ವಹಿಸುತ್ತಿದ್ದರು. ಅಲ್ಲದೆ ಆಗಾಗ ಬಿಹಾರಕ್ಕೆ ಹಿಂದಿರುಗುವುದಾಗಿ ಹೇಳುತ್ತಿದ್ದರು ಎಂದು ತಿಳಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಇದೇ ವಿಚಾರವಾಗಿ ದಂಪತಿ ನಡುವೆ ಪದೇಪದೇ ಜಗಳ ನಡೆಯುತ್ತಿತ್ತು. ಜುಲೈ 25ರಂದು ಕೆಲಸ ಮುಗಿಸಿ ಮನೆಗೆ ಬಂದಾಗ ಊಟ ಸಿದ್ಧವಾಗಿರಲಿಲ್ಲ. ಇದರಿಂದ ಮಾತಿನ ಚಕಮಕಿ ಆರಂಭವಾಗಿ ವಾಗ್ವಾದ ತೀವ್ರಗೊಂಡಿತು. ಈ ವೇಳೆ ಪತ್ನಿ ತನ್ನ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದರು ಎಂದು ಆರೋಪಿ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.
ಕೋಪದ ಭರದಲ್ಲಿ ಆರೋಪಿ ಪತ್ನಿಯ ಕುತ್ತಿಗೆ ಹಿಸುಕಿ ಹತ್ಯೆ ಮಾಡಿ, ಬಳಿಕ ಮೃತದೇಹದ ಮುಖಕ್ಕೆ ಪ್ಲಾಸ್ಟಿಕ್ ಸುತ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ವಿಚಾರಣೆಯಲ್ಲಿ ಬಹಿರಂಗವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ನಂತರ ಬಿಹಾರಕ್ಕೆ ಪರಾರಿಯಾಗಿದ್ದ ಆರೋಪಿಯನ್ನು ತಾಂತ್ರಿಕ ಮಾಹಿತಿ ಆಧರಿಸಿ ಪತ್ತೆಹಚ್ಚಿದ ಕುಂಬಳಗೋಡು ಪೊಲೀಸರು, ಬಿಹಾರದಲ್ಲಿ ಬಂಧಿಸಿ ಬೆಂಗಳೂರಿಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.






