ಧಾರವಾಡ: 20 ವರ್ಷದ ಆದಿತ್ಯ ಮ್ಯಾಗೇರಿ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಇದೀಗ ಪೊಲೀಸರ ವಿರುದ್ಧ ಹೊಸ ಆರೋಪಗಳು ಕೇಳಿಬಂದಿವೆ. ಗಾಂಜಾ ಸೇವನೆ ಮಾಡಿಲ್ಲವೆಂದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದ್ದರೂ, ಸುಳ್ಳು ಆರೋಪ ಹೊರಿಸಿ ಹಣದ ಬೇಡಿಕೆ ಇಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮೂಲಗಳ ಪ್ರಕಾರ, ಕೆಲವು ದಿನಗಳ ಹಿಂದೆ ನಡೆದ ಗಾಂಜಾ ದಾಳಿಯಲ್ಲಿ ಆದಿತ್ಯ ಸೇರಿ ಹತ್ತಕ್ಕೂ ಹೆಚ್ಚು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಪರೀಕ್ಷೆಯಲ್ಲಿ ಗಾಂಜಾ ಸೇವನೆ ಮಾಡಿಲ್ಲವೆಂದು ವರದಿ ಬಂದರೂ, ಈ ಪ್ರಕರಣದಲ್ಲಿ ತಲಾ ₹10,000 ರೂಪಾಯಿ ಹಣವನ್ನು ಮಧ್ಯವರ್ತಿಯ ಮೂಲಕ ಫೋನ್ಪೇ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಇದಷ್ಟೇ ಅಲ್ಲದೆ, ಕಳೆದ ಎರಡು ದಿನಗಳಿಂದ ಆದಿತ್ಯನಿಗೆ ಮತ್ತೆ ₹2,000 ರೂಪಾಯಿ ನೀಡುವಂತೆ ಪದೇಪದೇ ಕಿರುಕುಳ ನೀಡಲಾಗುತ್ತಿತ್ತು ಎಂಬ ಆರೋಪವೂ ಕೇಳಿಬಂದಿದೆ. ಪೊಲೀಸರ ಈ ನಿರಂತರ ಒತ್ತಡ ಮತ್ತು ಹಣದಾಸೆಯನ್ನು ತಡೆಯಲಾಗದೆ ಆದಿತ್ಯ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮೃತ ಆದಿತ್ಯ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬೇಲೂರು ಗ್ರಾಮದ ನಿವಾಸಿಯಾಗಿದ್ದು, ತಂದೆಯನ್ನು ಕಳೆದುಕೊಂಡ ನಂತರ ತಾಯಿ ಕವಿತಾ ಅವರು ಕಷ್ಟಪಟ್ಟು ಮಗನನ್ನು ಸಾಕಿ ಬೆಳೆಸಿದ್ದರು. ಮಗನ ಸಾವಿಗೆ ಪೊಲೀಸರೇ ಕಾರಣ ಎಂದು ತಾಯಿ ಆಕ್ರಂದನ ವ್ಯಕ್ತಪಡಿಸಿದ್ದು, ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂಬಂಧ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ಸತ್ಯಾಸತ್ಯತೆ ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.
